Sunday, April 20, 2025
Google search engine

Homeಸ್ಥಳೀಯಪ್ರಥಮ ಚಿಕಿತ್ಸೆ ಕುರಿತ ಅರಿವು ಪ್ರತಿಯೊಬ್ಬರಿಗೂ ಅಗತ್ಯ : ಜಿಲ್ಲಾಧಿಕಾರಿ

ಪ್ರಥಮ ಚಿಕಿತ್ಸೆ ಕುರಿತ ಅರಿವು ಪ್ರತಿಯೊಬ್ಬರಿಗೂ ಅಗತ್ಯ : ಜಿಲ್ಲಾಧಿಕಾರಿ

ಚಾಮರಾಜನಗರ: ಪ್ರಥಮ ಚಿಕಿತ್ಸೆ ಕುರಿತ ಕೌಶಲ್ಯಗಳ ಅರಿವು ಸರ್ಕಾರಿ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದ ಅಧಿಕಾರಿ, ಸಿಬ್ಬಂದಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಚಿಕಿತ್ಸಾ ಕೌಶಲ್ಯಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೈನಂದಿನ ವ್ಯವಹಾರಿಕ ಜೀವನದಲ್ಲಿ ರಸ್ತೆಯಲ್ಲಿ ಸಂಚರಿಸುವ ಯಾವುದೇ ವ್ಯಕ್ತಿ ಕುಸಿದುಬಿದ್ದ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ದೊರಕದಿರಬಹುದು. ಯಾವುದೇ ಉಪಕರಣವಿಲ್ಲದೇ ಸ್ಥಳದಲ್ಲಿಯೇ ವ್ಯಕ್ತಿಯ ಜೀವ ರಕ್ಷಣೆಗಾಗಿ ಪ್ರಥಮ ಚಿಕಿತ್ಸೆ ನೀಡಲು ಎಲ್ಲರೂ ಸ್ವಯಂ ಸಿದ್ದರಾಗಿರಬೇಕು. ಅದಕ್ಕಾಗಿ ಪ್ರಥಮ ಚಿಕಿತ್ಸೆಯ ಕೌಶಲ್ಯ ವಿಧಾನಗಳನ್ನು ಪ್ರತಿಯೊಬ್ಬರು ತಿಳಿದಿರಬೇಕು. ಪ್ರಥಮ ಚಿಕಿತ್ಸೆಯ ಬಗ್ಗೆ ಯುವಜನತೆ ಹೆಚ್ಚಿನ ಜಾಗೃತಿ ಹೊಂದಬೇಕು ಎಂದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸರಸ್ವತಿ ಅವರು ಮಾತನಾಡಿ ವಿದ್ಯಾರ್ಥಿಗಳು ಕೇವಲ ವ್ಯಾಸಂಗಕ್ಕೆ ಮಹತ್ವ ನೀಡದೇ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಪ್ರಥಮ ಚಿಕಿತ್ಸೆಯ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಗುರಿ ಸಾಧನೆಗೆ ಅವಶ್ಯವಾದ ಪರಿಶ್ರಮ ಹಾಕಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಮುಂದಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಹಮ್ಮದ್ ಅಕ್ಬರ್ ಅವರು ಮಾತನಾಡಿ ಎಲ್ಲರೂ ಪ್ರಥಮ ಚಿಕಿತ್ಸೆ ಕೌಶಲ್ಯಗಳನ್ನು ಅರಿತಿದ್ದರೆ ಮುಂದಿನ ದಿನಗಳಲ್ಲಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅರಕ್ಷಕರು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಜನರ ಪ್ರಾಣ ಉಳಿಸುವಲ್ಲಿ ಪ್ರಥಮ ಚಿಕಿತ್ಸೆಯ ಪ್ರಾಮುಖ್ಯತೆಯನ್ನು ಮನಗಾಣಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರಾದ ಡಾ. ಸಿಂಧೂ ಅವರು ಪ್ರಥಮ ಚಿಕಿತ್ಸೆಯ ಕೌಶಲ್ಯಗಳು, ರಕ್ತಸ್ರಾವ ತಡೆಗಟ್ಟುವ ವಿಧಾನಗಳ ಬಗ್ಗೆ ಸವಿವರವಾಗಿ ಮಾತನಾಡಿದರು. ಡಾ. ದೀಪಕ್ ಅವರು ವ್ಯಕ್ತಿಗೆ ಅಪಘಾತವಾದಾಗ ಅನುಸರಿಸಬಹುದಾದ ಎಚ್ಚರಿಸುವಿಕೆ, ಎದೆಬಡಿತ, ನಾಡಿಮಿಡಿತ ಕೌಶಲ್ಯಗಳನ್ನು ಪ್ರಾತ್ಯೆಕ್ಷಿಕೆ ಮೂಲಕ ಪ್ರದರ್ಶಿಸಿ ಮನದಟ್ಟು ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಎಂ. ವಿಶ್ವೇಶ್ವರಯ್ಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲೇಶ್, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಅರಕ್ಷಕರು, ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಹಾಜರಿದ್ದರು. ಇದೇ ವೇಳೆ ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

RELATED ARTICLES
- Advertisment -
Google search engine

Most Popular