ಮಡಿಕೇರಿ: ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ಬೇಕಿದೆ. 2026ಕ್ಕೆ ಲೋಕಸಭಾ ಕ್ಷೇತ್ರ ಮರುವಿಂಗಡಣೆ ಆಗಲಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕ್ಷೇತ್ರಗಳು ಜಾಸ್ತಿಯಾಗುತ್ತವೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮಡಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಜನ ಸಂಖ್ಯೆ ಜಾಸ್ತಿ ಆಗುತ್ತಿದೆ. ಕೊಡಗು-ಮೈಸೂರು ಜೊತೆಯಲ್ಲೇ ಇರುತ್ತೆ ಅಂತೇನಿಲ್ಲ. ಕೊಡಗು ಬಹಳ ವಿಶಿಷ್ಟ ಸಂಸ್ಕೃತಿ ಇರುವ ಜಿಲ್ಲೆ. ಇದನ್ನು ರಕ್ಷಿಸುವ ದೃಷ್ಟಿಯಿಂದ ಪ್ರತ್ಯೇಕ ಲೋಕಸಭಾ ಸ್ಥಾನ ಬೇಕು. ಈ ವಿಚಾರದಲ್ಲಿ ನಾನು ಕೊಡಗಿನ ಜನರ ಜೊತೆ ಇದ್ದೇನೆ ಎಂದರು.
ಕಳೆದ ಏಳು ತಿಂಗಳಿನಲ್ಲಿ ಸಿದ್ದರಾಮಯ್ಯ ಏನೂ ಕಡಿದು ಕಟ್ಟೆ ಹಾಕಿಲ್ಲ. ಸರ್ಕಾರದಿಂದ ಏಳು ತಿಂಗಳಲ್ಲಿ 7 ರೂಪಾಯಿನೂ ಕೊಡಗಿಗೆ ತಂದಿಲ್ಲ. ಮೊನ್ನೆಯಷ್ಟೇ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಚಾಲನೆ ನೀಡಿದ್ದಾರೆ. ಅವೆಲ್ಲವೂ ಕೇಂದ್ರ ಸರ್ಕಾರದ ಯೋಜನೆಗಳು. ಮಂಥರ್ ಗೌಡರನ್ನು ನೋಡಿ ಶಾಸಕ ಪೊನ್ನಣ್ಣ ಕಲಿಯಬೇಕು. ತಾವು ಮಾಡದ ಕೆಲಸಕ್ಕೆ ಮಂಥರ್ ಗೌಡ ಕ್ರೆಡಿಟ್ ತೆಗೆದುಕೊಳ್ಳಲ್ಲ ಎಂದು ವಾಗ್ದಾಳಿ ಮಾಡಿದರು.
146 ಕೋಟಿ ರೂ. ಯೋಜನೆಗೆ ಕಳೆದ ಫೆಬ್ರವರಿಯಲ್ಲಿ ಹಣ ಬಿಡುಗಡೆಯಾಗಲಿದೆ. ಇದು ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ತಂದಿರುವ ಯೋಜನೆ ಎಂದು ಯೋಜನೆಗಳ ದಾಖಲೆ ಬಿಡುಗಡೆ ಮಾಡಿದರು.
ವಿರಾಜಪೇಟೆ ಕ್ಷೇತ್ರದಲ್ಲಿ ಈಗ ಆಗುತ್ತಿರುವ ಅಬೀವೃದ್ಧಿ ಕೆಲಸಗಳು ಬೋಪಯ್ಯ ತಂದಿರುವುದು. ಅಮೃತ್-1, ಅಮೃತ- 2 ಕೇಂದ್ರ-ರಾಜ್ಯ ಸಹಭಾಗಿತ್ವದಲ್ಲಿ ಬೊಮ್ಮಾಯಿ ಸರ್ಕಾರ ಅನುದಾನ ನೀಡಿರುವುದು ಎಂದು ತಿಳಿಸಿದರು.