ಬೆಂಗಳೂರು : ಇತ್ತೀಚೆಗೆ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಜೆಸಿಬಿ ಬಳಸಿ ತೆರವು ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಕೋಗಿಲು ಲೇಔಟ್ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ತೀರ್ಮಾನಿಸಿದ್ದು ತೀವ್ರ ಚರ್ಚೆಗೀಡಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಕರ್ನಾಟಕದ ಜನ ವಿಪತ್ತಿಗೊಳಗಾಗಿ ಪರಿಹಾರಕ್ಕಾಗಿ ಕಾಯುತ್ತಿದ್ದರೂ ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಎಕ್ಸ್ ಸಂದೇಶದೊಂದಿಗೆ ಕರ್ನಾಟಕ ಸರ್ಕಾರವನ್ನು ಪ್ರಜಾಪ್ರಭುತ್ವ ವಿರೋಧಿ ಮತ್ತು ಜೆಸಿಬಿ ಸರ್ಕಾರ ಎಂದು ತೀವ್ರವಾಗಿ ಟೀಕಿಸಿದ್ದು, ಇದೆಲ್ಲದರ ನಡುವೆ ಕೋಗಿಲು ಲೇಔಟ್ ಸಂತ್ರಸ್ತರಿಗೆ ಬೇರೆ ಕಡೆ ವಸತಿ ನೀಡಲು ವ್ಯವಸ್ಥೆ ಮಾಡಿರುವುದು ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಈ ನಡುವೆ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳ ನೆಲಸಮದ ನಂತರ, ಸಿಎಂ ಸಿದ್ದರಾಮಯ್ಯ ಅರ್ಹ ನಿವಾಸಿಗಳಿಗೆ ಪರಿಹಾರ ಘೋಷಿಸಿದ್ದು, 7 ಕಿ.ಮೀ ಅಂತರದಲ್ಲಿ ತಲಾ 11.2 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆಗಳನ್ನು ನಿರ್ಮಿಸಲಾಗಿದೆ. ಈ ಕುರಿತು ಪ್ರಹ್ಲಾದ್ ಜೋಶಿ ಎಕ್ಸ್ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಂದು ಧರ್ಮದ ಓಲೈಕೆ ಹಾಗೂ ತುಷ್ಟೀಕರಣಕ್ಕಾಗಿ ಅತಿವೇಗವಾಗಿ ಹಾಗೂ ತುರ್ತಾಗಿ ಔಪಚಾರಿಕ ಪರಿಹಾರ ನೀಡಲು ಮುಂದಾಗಿರುವುದು ಅತಿ ಬೇಸರದ ಸಂಗತಿ ಎಂದು ಬರೆದುಕೊಂಡಿರುವ ಜೋಶಿ, ಬರ ಮತ್ತು ಪ್ರವಾಹದಂತಹ ವಿಪತ್ತುಗಳ ಪರಿಹಾರವನ್ನು ಪಡೆಯಲು ರಾಜ್ಯಾದ್ಯಂತ ಜನರು ವರ್ಷಗಳಿಂದ ಕಾಯುತ್ತಿದ್ದರು, ಈ ಸಂದರ್ಭದಲ್ಲಿ, ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ ಎಂದಿದ್ದಾರೆ.
ಪಕ್ಕದ ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರು ಕರೆ ಮಾಡಿ, ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ ನಂತರ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕಾಂಗ್ರೆಸ್ ಪಕ್ಷದ ನಾಯಕತ್ವದ ಕೈಗೊಂಬೆಯಾಗಿ, ತನ್ನ ಕರ್ತವ್ಯ ಹಾಗೂ ಕಾನೂನಿನ ಪರಿಮಿತಿಯ ಜವಾಬ್ದಾರಿಯನ್ನು ಗಾಳಿಗೆ ತೂರಿ, ತುಷ್ಠಿಕರಣ ರಾಜಕಾರಣದ ಪರಮಾವಧಿಯನ್ನು ಪ್ರದರ್ಶಿಸಿದೆ. ಗೃಹಲಕ್ಷ್ಮಿ ಫಲಾನುಭವಿಗಳು ಕಾಯಬಹುದೇ ವಿನಃ ಅಕ್ರಮವಾಗಿ ಅತಿಕ್ರಮಿಸಿದವರು ಕಾಯುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



