ಕೋಲಾರ: ಮುಳಬಾಗಿಲು ತಾಲೂಕಿನ ಕಾಶಿಪುರ ಅರಣ್ಯ ಪ್ರದೇಶದಲ್ಲಿದ್ದ ಶ್ರೀಗಂಧ ಕಳ್ಳತನಕ್ಕೆ ಯತ್ನಿಸಿದವರ ಕಾಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ.
ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದ ಭತ್ಯಪ್ಪ ಎಂಬುವನ ಕಾಲಿಗೆ ಗುಂಡು ತಾಗಿದೆ. ಮತ್ತೋರ್ವ ಪರಾರಿಯಾಗಿದ್ದಾನೆ.
ಇಂದು (ಜು.02) ಮುಂಜಾನೆ 5 ಗಂಟೆ ಸುಮಾರಿಗೆ ಭತ್ಯಪ್ಪ ಆಂಧ್ರ ಪ್ರದೇಶದ ಐವರೊಂದಿಗೆ ಜೊತೆಗೂಡಿ ಶ್ರೀಗಂಧ ಕಳ್ಳತನಕ್ಕೆ ಬಂದಿದ್ದನು. ಶ್ರೀಗಂಧ ಮರ ಕಳ್ಳತನ ಮಾಡುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಗಾರ್ಡ್ ಅನಿಲ್ ಬಂದಿದ್ದಾರೆ. ಬಳಿಕ, ಶ್ರೀಗಂಧ ಕಳ್ಳತನವನ್ನು ತಡೆಯಲು ಮುಂದಾಗಿದ್ದು, ಶರಣಾಗುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ.
ಆದರೆ, ಭತ್ಯಪ್ಪ ಮತ್ತು ಈತನ ಸಹಚರ ಗಾರ್ಡ್ ಅನಿಲ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಗಾರ್ಡ್ ಅನಿಲ್ ಭತ್ಯಪ್ಪ ಹಾಗೂ ಈತನ ಸಹಚರನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ಭತ್ಯಪ್ಪನ ಸಹಚರ ಪರಾರಿಯಾಗಿದ್ದಾನೆ. ಗುಂಡೇಟಿನಿಂದ ನರಳಾಡುತ್ತಿದ್ದ ಭತ್ಯಪ್ಪನನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.