ಪಿರಿಯಾಪಟ್ಟಣ: ತಾಲ್ಲೂಕಿನ ಕೋಮಲಾಪುರ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿಗರಾದ ಮಂಜುನಾಥ್ ಉಪಾಧ್ಯಕ್ಷರಾಗಿ ಶಿವಮ್ಮ ಶಿವರಾಜ್ ಅವಿರೋಧ ಆಯ್ಕೆಯಾದರು.
ಗ್ರಾ.ಪಂ ಕಚೇರಿಯಲ್ಲಿ ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಉಪಾಧ್ಯಕ್ಷ ಸ್ಥಾನಕ್ಕೆ ಶಿವಮ್ಮ ಶಿವರಾಜ್ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ ಅವಿರೋಧ ಆಯ್ಕೆ ಘೋಷಿಸಿದರು.
ಫಲಿತಾಂಶ ಬಳಿಕ ಜೆಡಿಎಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ಸಂಭ್ರಮಿಸಿದರು, ತಾ.ಪಂ ಮಾಜಿ ಉಪಾಧ್ಯಕ್ಷ ರಘುನಾಥ್, ಜೆಡಿಎಸ್ ಕಾರ್ಯದರ್ಶಿ ಬಿ.ವಿ ಗಿರೀಶ್ ಹಾಗೂ ಹಲವರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಶುಭ ಕೋರಿದರು.
ನಾಮಪತ್ರ ಸಲ್ಲಿಕೆ ವೇಳೆ ಹೈಡ್ರಾಮ: ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿಗ ಮಂಜುನಾಥ್ ಉಪಾಧ್ಯಕ್ಷ ಸ್ಥಾನಕ್ಕೆ ಶಿವಮ್ಮ ಶಿವರಾಜ್ ಚುನಾವಣಾಧಿಕಾರಿಗಳ ನಿರ್ದೇಶನದಂತೆ ನಿಗದಿತ ಸಮಯಕ್ಕೆ ನಾಮಪತ್ರ ಸಲ್ಲಿಸಿದ್ದರು. ಮತ್ತೋರ್ವ ಸದಸ್ಯ ಕೆ.ಎಂ ಅಶೋಕ್ ನಿಗದಿತ ಸಮಯ ಮುಗಿದ ಬಳಿಕ ನಾಮಪತ್ರ ಸಲ್ಲಿಸಲು ಆಗಮಿಸಿದ ವೇಳೆ ಚುನಾವಣಾಧಿಕಾರಿಗಳು ತಿರಸ್ಕರಿಸಿದಾಗ ಕಾಂಗ್ರೆಸ್ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು, ವಿಷಯ ತಿಳಿದು ಸ್ಥಳಕಾಗಮಿಸಿದ ಇನ್ಸ್ಪೆಕ್ಟರ್ ಕೆ.ವಿ ಶ್ರೀಧರ್, ಸಬ್ ಇನ್ಸ್ಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ನೀಡಿ ಚುನಾವಣಾ ಪ್ರಕ್ರಿಯೆ ನಡೆಯಲು ಅವಕಾಶ ನೀಡಿದ ಹಿನ್ನೆಲೆ ಅವಿರೋಧ ಆಯ್ಕೆ ಘೋಷಿಸಲಾಯಿತು.
ನೂತನ ಅಧ್ಯಕ್ಷ ಮಂಜುನಾಥ್ ಮಾತನಾಡಿ ಅಧ್ಯಕ್ಷನಾಗಲು ಸಹಕರಿಸಿದ ಸರ್ವ ಸದಸ್ಯರ ಸಹಕಾರದಿಂದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇನೆ, ನನ್ನ ಆಯ್ಕೆಗೆ ಸಹಕರಿಸಿದ ಮಾಜಿ ಶಾಸಕ ಕೆ.ಮಹದೇವ್, ಮೈಮೂಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.
ತಾ.ಪಂ ಮಾಜಿ ಉಪಾಧ್ಯಕ್ಷ ರಘುನಾಥ್ ಮಾತನಾಡಿ ನೂತನ ಅಧ್ಯಕ್ಷ ಉಪಾಧ್ಯಕ್ಷರು ಅಭಿವೃದ್ಧಿಗೆ ಒತ್ತು ನೀಡಿ ತಮ್ಮ ವ್ಯಾಪ್ತಿಯ ಹಳ್ಳಿಯ ಮೂಲಭೂತ ಸಮಸ್ಯೆ ಬಗೆಹರಿಸುವಂತೆ ತಿಳಿಸಿ ಶುಭ ಕೋರಿದರು.
ಈ ಸಂದರ್ಭ ಪಿಡಿಓ ಅಭಿಲಾಶ್ ಮತ್ತು ಸಿಬ್ಬಂದಿ ಗ್ರಂಥಪಾಲಕ ಕಾಂತರಾಜ್, ಸದಸ್ಯರಾದ ಗಣೇಶ್, ಪದ್ಮ, ಕೃಷ್ಣ, ಚಂದ್ರ, ಸೌಮ್ಯ, ಸುಗುಣ, ಶ್ರುತಿ, ರೈತ ಸಂಘ ತಾಲೂಕು ಅಧ್ಯಕ್ಷ ಸ್ವಾಮಿಗೌಡ ಮುಖಂಡರಾದ ಶಿವರಾಜ್, ಸೋಮೇಗೌಡ, ಈರೇಗೌಡ , ಚಂದ್ರೇಗೌಡ, ಯೋಗೇಶ್, ಶಂಕರ್ ಮತ್ತು ಪಕ್ಷದ ಕಾರ್ಯಕರ್ತರು ಇದ್ದರು