ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಬೀದಿದೀಪ ಕಂಬಗಳ ಅಳವಡಿಕೆ ವಿವಾದದ ಸ್ವರೂಪ ಪಡೆದಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಅಳವಡಿಸಲಾಗಿರುವ ಬೀದಿ ದೀಪದ ಕಂಬಗಳ ಮೇಲೆ ಗದೆ, ಬಿಲ್ಲುಬಾಣ, ತಿರುಪತಿ ತಿಮ್ಮಪ್ಪನ ನಾಮದ ಚಿತ್ರಗಳಿವೆ. ಒಂದೇ ಸಮುದಾಯದ ದೇವರ ಚಿತ್ರಗಳ ಅಳವಡಿಕೆಗೆ ವಿರೋಧ ವ್ಯಕ್ತವಾಗಿದ್ದು ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಎಸ್‌ಡಿಪಿಐ ವಿದ್ಯುತ್ ಕಂಬಗಳ ತೆರವಿಗೆ ಆಗ್ರಹಿಸಿದೆ.
ನಾಲ್ಕೈದು ದಿನಗಳ ಹಿಂದೆ ಪಟ್ಟಣದ ಜುಲೈ ನಗರ ಕ್ರಾಸ್ ನಿಂದ ಸಿಬಿಎಸ್ ಸರ್ಕಲ್ ವರೆಗೆ ರಸ್ತೆಯ ಮಧ್ಯಭಾಗದಲ್ಲಿ ಕಂಬಗಳನ್ನು ಅಳವಡಿಸಲಾಗಿತ್ತು. ಕೆಕೆಆರ್ಡಿಬಿ ಅನುದಾನದಲ್ಲಿ ಕಂಬಗಳನ್ನು ಹಾಕಲಾಗಿತ್ತು. ಆದರೆ ಕಂಬಗಳ ಮೇಲೆ ಗದೆ, ಬಿಲ್ಲುಬಾಣ, ತಿರುಪತಿ ತಿಮ್ಮಪ್ಪನ ನಾಮದ ಚಿತ್ರಗಳಿದ್ದು ವಿದ್ಯುತ್ ಕಂಬಗಳ ತೆರವು ಮಾಡಲು ಎಸ್‌ಡಿಪಿಐ ಮುಖಂಡರು ಆಗ್ರಹಿಸಿದ್ದಾರೆ.
ಕಂಬಗಳ ಅಳವಡಿಕೆಗೆ KRIDL ಏಜೆನ್ಸಿಗೆ KKRDB ಗುತ್ತಿಗೆ ನೀಡಿತ್ತು. ಕೂಡಲೇ ವಿದ್ಯುತ್ ಕಂಬ ತೆರವು ಮಾಡುವಂತೆ ಎಸ್‌ಡಿಪಿಐ ಆಗ್ರಹಿಸಿದೆ. ಈ ಬಗ್ಗೆ ಗಂಗಾವತಿ ನಗರಸಭೆ ಆಯುಕ್ತರಿಗೆ ಎಸ್‌ಡಿಪಿಐ ಮನವಿ ಸಲ್ಲಿಸಿದೆ. ಆದರೆ ಯಾವುದೇ ಸಮಸ್ಯೆ ಇಲ್ಲ, ತೆರವುಗೊಳಿಸಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ರಾಮನ ಭಂಟ ಹನುಮನ ಜನ್ಮಸ್ಥಳ ಇರೋದು ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ. ಧಾರ್ಮಿಕ ಸ್ಥಳಗಳಲ್ಲಿ ಈ ರೀತಿಯ ಚಿತ್ರಗಳು ಸಾಮಾನ್ಯ. ಯಾವುದೇ ಕಾರಣಕ್ಕೂ ತೆರವು ಮಾಡಬಾರದು ಎಂದು ಹಿಂದೂ ಸಂಘಟನೆಗಳ ಮುಖಂಡರು ನಗರಸಭೆಗೆ ಒತ್ತಾಯಿಸಿದ್ದಾರೆ.