ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಕೆ.ಸಿ.ರೋಡ್ ನ ಕೋಟೆಕಾರು ವ್ಯವಸಾಯ ಸಹಕಾರ ಸಂಘದಲ್ಲಿ ಜನವರಿ 17ರಂದು ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸುತ್ತಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಪೊಲೀಸರು ಗುಂಡೇಟು ಹಾಕಿದ್ದಾರೆ.
ನಿನ್ನೆ ತನಿಖಾ ತಂಡವು ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಬಂಧಿಸಿತ್ತು.
ಈ ಪೈಕಿ ಮುಂಬೈನ ಚೆಂಬೂರಿನ ತಿಲಕ್ ನಗರ ನಿವಾಸಿ ಕಣ್ಣನ್ ಮಣಿ (36) ಎಂಬಾತನನ್ನು ಇಂದು ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಆರೋಪಿಗಳು ನೀಡಿದ ಮಾಹಿತಿಯ ಪ್ರಕಾರ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ.ರಸ್ತೆಯ ಆಲಂಕಾರು ಗುಡ್ಡೆ ಬಳಿ ಇಂದು ಸಂಜೆ 4:20 ರ ಸುಮಾರಿಗೆ ಸ್ಥಳ ಪರಿಶೀಲನೆ ನಡೆಸಲಾಯಿತು. ಆರೋಪಿಯನ್ನು ಉಳ್ಳಾಲ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ತನಿಖಾ ತಂಡದ ಸದಸ್ಯರ ಉಪಸ್ಥಿತಿಯಲ್ಲಿ ತಪಾಸಣೆ ನಡೆಸಲಾಯಿತು.
ತಪಾಸಣೆ ವೇಳೆ ಆರೋಪಿ ಕಣ್ಣನ್ ಮಣಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಸ್ಥಳದಲ್ಲಿ ಸಿಕ್ಕ ಮುರಿದ ಬಿಯರ್ ಬಾಟಲಿಯನ್ನು ಬಳಸಿ ಬೆಂಗಾವಲು ಸಿಬ್ಬಂದಿಗಳಾದ ಅಂಜನಪ್ಪ ಮತ್ತು ನಿತಿನ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಆರೋಪಿಯು ತನಿಖಾಧಿಕಾರಿ, ಉಳ್ಳಾಲ ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ತಳ್ಳಿ ಚಾಕುವಿನಿಂದ ಇರಿದು ಕೊಲ್ಲಲು ಪ್ರಯತ್ನಿಸಿದ್ದಾರೆ. ಹೀಗಾಗಿ ಗಾಳಿಯಲ್ಲಿ ಎಚ್ಚರಿಕೆಯ ಗುಂಡು ಹಾರಿಸಿದ ಸಿಸಿಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಎಚ್ಚರಿಕೆ ನೀಡಿದ್ದರೂ, ಆರೋಪಿ ತನ್ನ ದಾಳಿಯನ್ನು ಮುಂದುವರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ಇದಕ್ಕೆ ಪ್ರತಿಯಾಗಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ ಉಳ್ಳಾಲ ಪಿಎಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ, ಸಿಸಿಬಿ ಘಟಕದ ಪಿಸಿ ಅಂಜನಪ್ಪ, ಉಳ್ಳಾಲ ಪಿಎಸ್ ಪಿಸಿ ನಿತಿನ್ ಗಾಯಗೊಂಡಿದ್ದಾರೆ.

ಗಾಯಗೊಂಡ ಸಿಬ್ಬಂದಿ ಮತ್ತು ಆರೋಪಿಗಳನ್ನು ತಕ್ಷಣ ಚಿಕಿತ್ಸೆಗಾಗಿ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.