ಗುಂಡ್ಲುಪೇಟೆ: ಪಟ್ಟಣದ ವಿವಿಧ ದಿನಸಿ ಹಾಗೂ ಟೀ ಅಂಗಡಿಗಳ ಮೇಲೆ ಆರೋಗ್ಯ ಇಲಾಖೆ ವತಿಯಿಂದ ತಹಸೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದಲ್ಲಿ ಕೋಟ್ಪಾ ದಾಳಿ ನಡೆಸಿ ತಂಬಾಕು ಮಾರಾಟ ಮಾಡುತ್ತಿದ್ದ ಮಾಲೀಕರಿಗೆ ದಂಡ ವಿಧಿಸಲಾಯಿತು. ಪಟ್ಟಣದ ರಾಷ್ಟ್ರೀಯ ಹೆದ್ದಾರಿ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಹಳೇ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಹಲವು ಅಂಗಡಿಗಳ ಮೇಳೆ ದಾಳಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-೨೦೦೩ರ ಕುರಿತು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಮಾತನಾಡಿ, ತಂಬಾಕು ಮುಕ್ತ ಯುವ ಪೀಳಿಗೆ ಮಾಡುವ ನಿಟ್ಟಿನಲ್ಲಿ ಶಾಲಾ-ಕಾಲೇಜು ಆವರಣದಿಂದ ೧೦೦ ಮೀಟರ್ ದೂರದವರೆಗೆ ತಂಬಾಕು ಮಾರಾಟ ನಿಷೇಧ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಜಾಗದಲ್ಲಿಯು ನಾಮಫಲಕ ಅಳವಡಿಸುವುದು, ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿದೆ. ಕೆಲವು ವಸತಿ ಪ್ರದೇಶದಲ್ಲಿ ಧೂಮಪಾನ ಅಡ್ಡ ಮಾಡಿಕೊಂಡಿರುವವರ ವಿರುದ್ಧ ಕೂಡಾ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ತಂಬಾಕು ಕುರಿತ ಜಾಹೀರಾತು ನಿಷೇಧಿಸುವುದು, ೧೮ ವರ್ಷದೊಳಗಿನವರಿಗೆ ತಂಬಾಕು ಮಾರಾಟ ಮಾಡುವುದು, ನಿಷೇಧಿತ ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ.೮೫ರಷ್ಟು ಆರೋಗ್ಯ ಎಚ್ಚರಿಕೆ ಚಿನ್ಹೆ ಕಡ್ಡಾಯ ಕುರಿತು ಮಾಹಿತಿ ಹಾಗೂ ಜಾಗೃತಿ ಮೂಡಿಸಿ ಉಲ್ಲಂಘನೆ ಮಾಡಿದವರ ವಿರುದ್ಧ ಎಚ್ಚರಿಕೆ ನೀಡಿ ಒಟ್ಟು ೫ ಪ್ರಕರಣ ದಾಖಲಿಸಿ ೮೦೦ ರೂ. ದಂಡ ಸಂಗ್ರಹಿಸಲಾಯಿತು.
ತಹಸೀಲ್ದಾರ್ ಟಿ.ರಮೇಶ್ ಬಾಬು ಮಾತನಾಡಿ, ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಅದರ ಉಪಯೋಗ ಕೋಟ್ಪಾ ಕಾಯ್ದೆ ಅಡಿಯಲ್ಲಿ ಅವಕಾಶವಿದ್ದು, ಅದನ್ನು ಉಲ್ಲಂಘಿಸಿದಲ್ಲಿ ಕಾನೂನು ರೀತಿ ಕ್ರಮ ವಹಿಸಲಾಗುತ್ತದೆ ಎಂದು ಎಚ್ಚರಿಸಿದರು. ದಾಳಿ ವೇಳೆ ಆರೋಗ್ಯ ನಿರೀಕ್ಷಣಾಧಿಕಾರಿ ಸ್ವಾಮಿ, ವೀರಣ್ಣ, ಜಿಲ್ಲಾ ಸಲಹೆಗಾರ ಪ್ರಶಾಂತ್, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.