Saturday, April 12, 2025
Google search engine

Homeರಾಜ್ಯಸುದ್ದಿಜಾಲಕೆಪಿಟಿಸಿಎಲ್ ಟವರ್ ನಿರ್ಮಾಣಕ್ಕಿದ್ದ ವಿಘ್ನ ನಿವಾರಣೆ: ಕಾಮಗಾರಿ ಆರಂಭ

ಕೆಪಿಟಿಸಿಎಲ್ ಟವರ್ ನಿರ್ಮಾಣಕ್ಕಿದ್ದ ವಿಘ್ನ ನಿವಾರಣೆ: ಕಾಮಗಾರಿ ಆರಂಭ

ಮೈಸೂರು: ಭೂ ಮಾಲೀಕರ ಜತೆಗಿನ ಯಶಸ್ವಿ ಸಂಧಾನ ಹಾಗೂ ಸೂಕ್ತ ಪರಿಹಾರ ಭರವಸೆಯ ಬಳಿಕ ಹೆಚ್.ಡಿ.ಕೋಟೆ ತಾಲೂಕು ವಡ್ಡರಗುಡಿ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ವಿಳಂಬವಾಗಿದ್ದ ಕೆಪಿಟಿಸಿಎಲ್ ನ 66/11 ಕೆ.ವಿ. ವಿದ್ಯುತ್‌ ಗೋಪುರ ಮತ್ತು ಲೈನ್‌ ನಿರ್ಮಾಣ ಕಾರ್ಯಕ್ಕೆ ಇದ್ದ ವಿಘ್ನ ನಿವಾರಣೆಯಾಗಿದೆ.

ಪೊಲೀಸರ ಸಮ್ಮುಖದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ಜಮೀನು ಮಾಲೀಕರ ಜತೆ ನಡೆದ ಮಾತುಕತೆ ಬಳಿಕ ಸೂಕ್ತ ಪರಿಹಾರದೊಂದಿಗೆ ನಿಗದಿತ ಸ್ಥಳದಲ್ಲಿ ಟವರ್ ನಿರ್ಮಾಣಕ್ಕೆ ಸರ್ವೆ ನಡೆಸಿ ಕಾಮಗಾರಿ ಆರಂಭಿಸಲು ಜಮೀನು ಮಾಲೀಕರು ಸಮ್ಮತಿಸಿದ್ದಾರೆ.

ಕಾಡಂಚಿನ ನೂರಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಕಲ್ಪಿಸುವ ಉದ್ದೇಶದಿಂದ ಹೆಚ್.ಡಿ.ಕೋಟೆ ತಾಲೂಕು ವಡ್ಡರಗುಡಿ ಗ್ರಾಮದ ಜಮೀನಿನಲ್ಲಿ 66/11 ವಿದ್ಯುತ್ ಗೋಪುರ ನಿರ್ಮಿಸಲು ಸ್ಥಳ ನಿಗದಿ ಮಾಡಲಾಗಿತ್ತು. ಆದರೆ, ಕಾನೂನಿನ ಮಾಹಿತಿಯ ಕೊರತೆಯಿಂದಾಗಿ ಸ್ಥಳೀಯರು ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಕೆಲಸ ಆರಂಭಿಸಲು ಅವಕಾಶ ನೀಡಿರಲಿಲ್ಲ.

ಈ ಮಧ್ಯೆ ಜಿಲ್ಲಾಧಿಕಾರಿಗಳ ನ್ಯಾಯಾಲಯವು,ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ನೀಡಿ ನಿಗದಿತ ಸ್ಥಳದಲ್ಲಿಯೇ ಕಾಮಗಾರಿ ಆರಂಭಿಸುವಂತೆ ಆದೇಶ ನೀಡಿತ್ತು. ಅಲ್ಲದೆ, ಕಾಮಗಾರಿ ನಡೆಸಲು ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸುವಂತೆಯೂ ಸೂಚಿಸಿತ್ತು. ಅದರಂತೆ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಟಿ.ಎಸ್. ರಮೇಶ್‌, ಅಧೀಕ್ಷಕ ಇಂಜಿನಿಯರ್‌, ಯೋಜನೆ, ಕೆಪಿಟಿಸಿಎಲ್ ಮೈಸೂರು ವಿಭಾಗ ಇವರ ನೇತೃತ್ವದಲ್ಲಿ ಸೋಮವಾರ ಜಮೀನು ಮಾಲೀಕರೊಂದಿಗೆ ಮಾತುಕತೆ ನಡೆಸಿ, ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಲಾಯಿತು. ಇದರಿಂದ ಸಮಾಧಾನಗೊಂಡ ಜಮೀನು ಮಾಲೀಕರು ಕಾಮಗಾರಿ ಆರಂಭಿಸಲು ಒಪ್ಪಿಗೆ ಸೂಚಿಸಿದರು. ಅದರಂತೆ ಸೋಮವಾರವೇ ಕೆಲಸ ಆರಂಭಿಸಲಾಗಿದೆ.

ಏನಿದು ಪ್ರಕರಣ?

ಅಸ್ತಿತ್ವದಲ್ಲಿರುವ ಕೆಪಿಟಿಸಿಎಲ್ ನ ಹೋಸೂರು ಗೇಟ್ 66/11 ಕೆ.ವಿ. ಉಪ-ಕೇಂದ್ರ ಮೈಸೂರಿನಿಂದ 20.568 ಕಿ.ಮೀ. ದೂರದ ಹೆಚ್.ಡಿ.ಕೋಟೆಯಲ್ಲಿ ಅಸ್ತಿತ್ವದಲ್ಲಿರುವ 66/11 ಕೆ.ವಿ. ಉಪ ಕೇಂದ್ರಕ್ಕೆ ಡಿಸಿ ಟವರ್‌ಗಳ ಮೇಲೆ ಉದ್ದೇಶಿತ 66 ಕೆ.ವಿ. ಎಸ್‌ಸಿ ಲೈನ್ ನಿರ್ಮಾಣ ಕಾಮಗಾರಿಯನ್ನು 9.77 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈ ಯೋಜನೆಯಲ್ಲಿ 87 ಗೋಪುರಗಳು ಬರುತ್ತಿದ್ದು, ಅವುಗಳ ಪೈಕಿ 81 ಗೋಪುರಗಳ ಕಾಮಗಾರಿ ಪೂರ್ಣಗೊಂಡಿದೆ. ಕೇವಲ 6 ಗೋಪುರಗಳ ನಿರ್ಮಾಣವಾಗಬೇಕಿದ್ದು, ಗೋಪುರ ಸಂಖ್ಯೆ 75ಕ್ಕೆ ಸಂಬಂಧಿಸಿದಂತೆ ಜಮೀನು ಮಾಲಿಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಹೀಗಾಗಿ ಯೋಜನೆಗೆ ಅವಕಾಶ ಕಲ್ಪಿಸುವಂತೆ ಕೆಪಿಟಿಸಿಎಲ್ ವತಿಯಿಂದ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿಗಳ ನ್ಯಾಯಾಲಯವು, ವಿದ್ಯುತ್ ಸರಬರಾಜು ಏರ್ಪಡಿಸಲು ಮತ್ತು ಉತ್ತಮಗೊಳಿಸಲು ಗೋಪುರಗಳ ನಿರ್ಮಾಣದ ಯೋಜನೆಗಾಗಲೀ, ನಿರ್ಮಾಣಗೊಂಡಿರುವ ಗೋಪುರಗಳ ಮಾರ್ಪಾಡುಗಳಿಲಾಗಲೀ ಅಥವಾ ಈಗಾಗಲೇ ಸ್ಥಾಪಿಸಲಾಗಿರುವ ಗೋಪುರಗಳ ವಿದ್ಯುತ್ ಲೈನುಗಳ ಪುನರ್ ನಿರ್ಮಾಣದ ಯೋಜನೆಗಳಾಗಲಿ ಯಾವುದೇ ತೊಂದರೆ ಉಂಟು ಮಾಡಬಾರದು ಎಂದು ಆದೇಶಿಸಿತ್ತು. ಅಲ್ಲದೆ, ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಜಮೀನು ಮಾಲೀಕರು ಪರಿಹಾರ ಪಡೆದು ಯೋಜನೆಗೆ ಸಹಕರಿಸಬೇಕು. ಒಂದು ವೇಳೆ ಇದನ್ನು ಮೀರಿ ಕಾಮಗಾರಿಗೆ ತೊಂದರೆ ಉಂಟು ಮಾಡಿದಲ್ಲಿ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು.

ಈ ಆದೇಶದನ್ವಯ ಕೆಪಿಟಿಸಿಎಲ್ ಮತ್ತು ಸೆಸ್ಕ್ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಸ್ಥಳಕ್ಕೆ ತೆರಳಿ ಸರ್ವೇ ಕಾರ್ಯ ಆರಂಭಿಸಲು ಮುಂದಾದಾಗ ಜಮೀನು ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿದ ಆದೇಶವನ್ನು ವಿವರಿಸಿ ಸರ್ವೆ ನಡೆಸಿ ಕಾಮಗಾರಿ ಆರಂಭಿಸಲು ಅವಕಾಶ ಕಲ್ಪಿಸುವಂತೆ ಕೋರಿದರು. ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶದಂತೆ ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನೂ ನೀಡಿ ಜಮೀನು ಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾದರು. ಅಧಿಕಾರಿಗಳ ಭರವಸೆಗೆ ಸ್ಪಂದಿಸಿದ ಜಮೀನು ಮಾಲೀಕರು ಕೆಲಸ ಆರಂಭಿಸಲು ಸಮ್ಮತಿಸಿದರು.

RELATED ARTICLES
- Advertisment -
Google search engine

Most Popular