ಕೆ.ಆರ್.ನಗರ: ಸಂಘದ ಸದಸ್ಯರು ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ ಸಂಘಟಿತರಾಗುವುದರ ಜತೆಗೆ ಆರ್ಥಿಕವಾಗಿಯು ಅಭಿವೃದ್ದಿ ಸಾಧಿಸಬಹುದು ಎಂದು ತಾಲೂಕು ನಾಮಧಾರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಂ.ಸಿ.ಸಣ್ಣಸ್ವಾಮಿ ಹೇಳಿದರು.
ಪಟ್ಟಣದ ಹುಣಸೂರು ರಸ್ತೆಯಲ್ಲಿರುವ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆದ ತಾಲೂಕು ನಾಮಧಾರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಕಳೆದ ೧೧ ವರ್ಷಗಳ ಹಿಂದೆ ಆರಂಭವಾದ ನಮ್ಮ ಸಂಘವು ಪ್ರಸ್ತುತ ೨೫೦ ಮಂದಿ ಸದಸ್ಯರನ್ನು ಹೊಂದಿದ್ದು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ನಾಮಧಾರಿ ಸಮಾಜದ ಎಲ್ಲಾ ನೌಕರರು ಕಡ್ಡಾಯವಾಗಿ ಸಂಘದ ಸದಸ್ಯರಾಗುವುದರ ಮೂಲಕ ಸಂಘಟಿತರಾಗಿ ನಮ್ಮ ಜನಾಂಗದ ಏಳಿಗೆಯ ಜತೆಗೆ ಸಮುದಾಯದ ಏಳಿಗೆಗೂ ಕಂಕಣಬದ್ದರಾಗಿ ದುಡಿಯೋಣ ಎಂದ ಅವರು ನಮ್ಮ ದುಡಿಮೆಯ ಹಣದಲ್ಲಿ ಸ್ವಲ್ಪ ಭಾಗವನ್ನು ನೊಂದವರು ಮತ್ತು ಬಡವರ ಸಹಾಯಕ್ಕೆ ಬಳಸೋಣ ಎಂದು ಸಲಹೆ ನೀಡಿದರು.
ಸಂಘದ ವತಿಯಿಂದ ಭವಿಷ್ಯದಲ್ಲಿ ನಾಮಧಾರಿ ಸಮಾಜದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಉದ್ಯೋಗ ಶೀಲ ತರಬೇತಿ ನೀಡುವುದರ ಜತೆಗೆ ಅವರ ಬದುಕಿಗೆ ಅನುಕೂಲವಾಗುವಂತಹಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆಂದು ಪ್ರಕಟಿಸಿದ ಅಧ್ಯಕ್ಷರು ನಮ್ಮ ಈ ಕೆಲಸಗಳಿಗೆ ಸರ್ವರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತಲ್ಲದೆ ನಿವೃತ್ತ ನೌಕರರನ್ನು ಗೌರವಿಸಲಾಯಿತು.
ಅಖಿಲ ನಾಮಧಾರಿ ಗೌಡ ತಾಲೂಕು ಘಟಕದ ಮಹಿಳಾ ವಿಭಾಗದ ಅಧ್ಯಕ್ಷೆ ಲೀಲಾಂಬಿಕೆ, ಸಂಘದ ಮಾಜಿ ಅಧ್ಯಕ್ಷ ಎಸ್.ಆರ್.ಪ್ರಕಾಶ್, ಪಿನಾಕಿಣಿ, ಗೌರವ ಸಲಹೆಗಾರ ಕೆ.ಜೆ.ರಾಮೇಗೌಡ, ಕೇಂದ್ರ ಸಂಘದ ಉಪಾಧ್ಯಕ್ಷ ಕೆ.ಆರ್.ಗಿರೀಶ್, ಖಜಾಂಚಿ ಕೃಷ್ಣೇಗೌಡ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಎಸ್.ರುಕ್ಮಾಂಗದ, ಉಪಾಧ್ಯಕ್ಷ ಬಿ.ಕಾಂತರಾಜು, ಪ್ರಧಾನ ಕಾರ್ಯದರ್ಶಿ ಜಿ.ರಮೇಶ್, ಖಜಾಂಚಿ ಎನ್.ಪಿ.ನಂಜುoಡ, ಸಹಕಾರ್ಯದರ್ಶಿ ಎನ್.ಕೆ.ಧರ್ಮರಾಜು, ಸಂಘಟನಾ ಕಾರ್ಯದರ್ಶಿ ಎನ್.ಸಿ.ಹರೀಶ್, ಸಂಚಾಲಕ ಎನ್.ಕೆ.ಮಂಜುನಾಥ್, ನಿರ್ದೇಶಕರಾದ ಗುರುಪ್ರಕಾಶ್, ಈಶ್ವರ್, ಎನ್.ಆರ್.ಅರವಿಂದ್, ಸರ್ವಮಂಗಳ, ಪ್ರಸನ್ನಕುಮಾರ್, ಬಿ.ಎ.ರಘು, ಸಮಾಜದ ಮುಖಂಡರಾದ ಕೆ.ಟಿ.ಗುರುರಾಜು, ಮರೀಗೌಡ ಮತ್ತಿತರರು ಹಾಜರಿದ್ದರು.