ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ಹೊರ ವಲಯದಲ್ಲಿರುವ ಹಳೆಎಡತೊರೆಯಲ್ಲಿ ರಥಸಪ್ತಮಿ ಅಂಗವಾಗಿ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿಯವರ ಬ್ರಹ್ಮ ರಥೋತ್ಸವವು ಶುಕ್ರವಾರ ಅತ್ಯಂತ ವೈಭವದಿಂದ ನಡೆಯಿತು.
ಬೆಳಿಗ್ಗೆ ೧೦.೦೫ ರಿಂದ ೧೦.೩೦ರವರೆಗೆ ಮೇಷ ಲಗ್ನದಲ್ಲಿ ಜರುಗಿದ ರಥೋತ್ಸವಕ್ಕೆ ಶಾಸಕ ಡಿ.ರವಿಶಂಕರ್ ತಮ್ಮ ಪತ್ನಿ ಸುನೀತಾ ಅವರೊಂದಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ದೇವರಿಗೆ ಜಯಘೋಷ ಕೂಗಿ ದೇವಾಲಯದ ಸುತ್ತ ಒಂದು ಸುತ್ತು ರಥವನ್ನು ಎಳೆದರು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ದೇವರಿಗೆ ವಿಶಿಷ್ಟ ಅಲಂಕಾರ ಮಾಡಲಾಗಿತ್ತಲ್ಲದೆ ತಳಿರು ತೋರಣ ಮತ್ತು ಹೂಗಳಿಂದ ಶೃಂಗರಿಸಲಾಗಿತ್ತು.
ಕೆ.ಆರ್.ನಗರ ಪಟ್ಟಣದ ಸೇರಿದಂತೆ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ನೂರಾರು ಗ್ರಾಮಗಳ ಭಕ್ತರು ಜಾತ್ರೆಗೆ ಭೇಟಿ ನೀಡಿ ರಥಕ್ಕೆ ಹಣ್ಣು ಧವನ ಎಸೆದು ಹರಕೆ ತೀರಿಸಿ ಸರತಿ ಸಾಲಿನಲ್ಲಿ ನಿಂತು ಭಗವಂತನ ದರ್ಶನ ಪಡೆದರು. ಕೆಲವು ಭಕ್ತರು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು.
ನಾಲ್ಕು ವರ್ಷಗಳಿಂದ ರಥೋತ್ಸವ ನಡೆಯದ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷ ಆಸಕ್ತಿ ವಹಿಸಿದ್ದ ಶಾಸಕ ಡಿ.ರವಿಶಂಕರ್ ಹದಿನೈದು ದಿನಗಳ ಹಿಂದೆಯೇ ಜಾತ್ರಾ ಪೂರ್ವಭಾವಿ ಸಭೆ ನಡೆಸಿ ವೈಭವದಿಂದ ಕಾರ್ಯಕ್ರಮ ಮತ್ತು ಜಾತ್ರೆ ನಡೆಸಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಾಗೂ ಪುರಸಭೆಯವರು ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಿದ್ದರು.
ಇದೇ ಮೊದಲ ಬಾರಿಗೆ ಪಟ್ಟಣದ ತೋಪಮ್ಮನವರ ದೇವಾಲಯದಿಂದ ಅರ್ಕೇಶ್ವರಸ್ವಾಮಿ ದೇವಾಲಯದವರೆಗೆ ಸುಮಾರು ೩ ಕಿ.ಮೀ ದೂರ ರಸ್ತೆಯ ಉದ್ದಗಲಕ್ಕೂ ದೀಪಾಲಂಕಾರ ಮಾಡಿದ್ದು ವಿಶೇಷವಾಗಿತ್ತಲ್ಲದೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮತ್ತು ವನಜಾಕ್ಷಮ್ಮದೊಡ್ಡಸ್ವಾಮೇಗೌಡ, ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಶಿವಕುಮಾರ್, ಶಂಕರ್, ಅಶ್ವಿನಿಪುಟ್ಟರಾಜು, ಶಂಕರ್‌ಸ್ವಾಮಿ, ಮುಖಂಡರಾದ ನೇತ್ರಾವತಿನಾಗೇಗೌಡ, ಸುನೀತಾರಮೇಶ್, ಸರಿತಾಜವರಪ್ಪ, ಲತಾರವಿಶಂಕರ್, ವಂದನ ಮತ್ತು ಇತರರು ಲಾಡು ಪ್ರಸಾದ ವಿತರಿಸಿದರು.

ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ನಂಜಪ್ಪ, ಎಪಿಸಿಎಂಸಿ ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಟಿಎಪಿಸಿಎಂಎಸ್ ನಿರ್ದೇಶಕರಾದ ಹೆಚ್.ಪಿ.ಪ್ರಶಾಂತ್, ದೊಡ್ಡಕೊಪ್ಪಲುರವಿ, ತೋಟಪ್ಪನಾಯಕ, ಪುರಸಭೆ ಸದಸ್ಯ ಕೆ.ಎಲ್.ಜಗದೀಶ್ ಮಾಜಿ ಸದಸ್ಯರಾದ ಎಸ್.ಯೋಗನಂದ ಕೆ.ವಿನಯ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್.ಕುಮಾರ್, ಮಾಜಿ ನಿರ್ದೇಶಕರಾದ ಗಡ್ಡಾಮಹೇಶ್, ಕೆ.ಎನ್.ಪ್ರಸನ್ನ, ಕೆಂಚಿ ಮಂಜು,
ತಹಶೀಲ್ದಾರ್ ಸಿ.ಎಸ್.ಪೂರ್ಣಿಮ, ಪುರಸಭೆ ಅಧಿಕಾರಿ ಜಯಣ್ಣ ಸೇರಿದಂತೆ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.