ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಪತಿ ಮಾಡಿದ ಸಾಲಕ್ಕೆ ಬ್ಯಾಂಕಿನವರು ಕಳಿಸಿದ ನೋಟಿಸ್ ಗೆ ಹೆದರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ ಬೆಟ್ಟಹಳ್ಳಿ ಗ್ರಾಮದ ನಿವಾಸಿ ರಂಗಮ್ಮ (70) ಎಂಬುವರೇ ಆತ್ಮಹತ್ಯೆ ಮಾಡಿ ಕೊಂಡವರಾಗಿದ್ದು ತಾವು ವಾಸವಿರುವ ಮನೆಯ ಹಿಂಭಾಗದ ಶೌಚಾಲಯದಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣು ಆಗಿದ್ದಾರೆ.
ಇವರ ಪತಿ ಯಣ್ಣೇ ಗೌಡ ಇವರು 6 ವರ್ಷಗಳ ಹಿಂದೆ ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಸಾಲವನ್ನು ಜಮೀನು ಮತ್ತು ಹೊಗೆಸೊಪ್ಪಿನ ಬ್ಯಾರನ್ ಆಧಾರದ ಮೇಲೆ ಸಾಲವನ್ನು ಪಡೆದು ನಂತರದ ದಿನದಲ್ಲಿ ತೀರಿಹೋಗಿದ್ದು ಗಂಡ ತೀರಿಹೋದ ಬಳಿಕ ಹೆಂಡತಿಯಾದ ರಂಗಮ್ಮ ಅವರಿಗೆ ಬ್ಯಾಂಕ್ ವತಿಯಿಂದ ಅಸಲು ಮತ್ತು ಬಡ್ಡಿಯಿಂದ 8 ಲಕ್ಷ 50 ಸಾವಿರ ರೂಗಳ ಕಟ್ಟುವಂತೆ ನೋಟೀಸ್ ಬಂದಿದ್ದು, ಇದರಿಂದ ಕಂಗಾಲಾದ ಇವರು ಭಯ ಭೀತರಾಗಿ ಶನಿವಾರ ರಾತ್ರಿ 8 ಗಂಟೆ ಸಮಯದಲ್ಲಿ ರೈತ ಮಹಿಳೆಯು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.
ಘಟನೆಯ ಸಂಬಂಧ ಮೃತರ ಪುತ್ರ ಶೆಟ್ಟಿಗೌಡ ಸಾಲಿಗ್ರಾಮ ಠಾಣೆಯಲ್ಲಿ ದೂರು ನೀಡಿದ್ದು, ಇದರ ಅನ್ವಯ ದೂರು ದಾಖಲಿಸಿಕೊಂಡು ಪೊಲೀಸರು ಮುಂದಿನ ಕಾನೂನು ಕ್ರಮ ಕೈ ಗೊಂಡಿರುತ್ತಾರೆ.