ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಇದೇ ಫೆಬ್ರವರಿ 15 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ತಿಳಿಸಿದರು.
ಅವರು ಕೆ.ಆರ್.ನಗರ ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ವ್ಯಾಪಾರ ನಡೆಸುವ ಉದ್ದಿಮೆದಾರರಿಗೆ ಹಾಗೂ ಕಿರಾಣಿ ಅಂಗಡಿ ಮಾಲೀಕರು ಸೇರಿದಂತೆ ಪ್ಲಾಸ್ಟಿಕ್ ಬಳಸಿ ವ್ಯಾಪಾರ ವಹಿವಾಟು ನಡೆಸುವವರಿಗೆ ಕಡ್ಡಾಯವಾಗಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಿರುವ ಬಗ್ಗೆ ಈ ಹಿಂದೆನೇ ತಿಳಿಸಲಾಗಿದೆ ಆದ್ದರಿಂದ ಜನವರಿ ೩೧ ರೊಳಗೆ ಅಂಗಡಿ ಮುಗ್ಗಟ್ಟು, ಗೋದಾಮುಗಳಲ್ಲಿರುವ ಶೇಖರಣೆ ಮಾಡಿ ಇಟ್ಟಿರುವ ಪ್ಲಾಸ್ಟಿಕ್ ನ್ನು ಖಾಲಿ ಅಥವಾ ನಾಶ ಪಡಿಸಿ ಎಂದು ಖಡಕ್ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಕೈಚೀಲ, ಪ್ಲಾಸ್ಟಿಕ್ ಬಟ್ಟಲುಗಳು, ಊಟದ ಎಲೆಗಳು ಹಾಗೂ ಮೇಜಿನ ಮೇಲೆ ಹಾಸುವ ಪ್ಲಾಸ್ಟಿಕ್ ರೋಲ್‌ಗಳು, ಪ್ಲಾಸ್ಟಿಕ್ ಲೋಟಗಳನ್ನು ಉತ್ಪಾದನೆ, ಸಂಗ್ರಹಣೆ, ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇದಿಸಿದೆ ಎಂದರಲ್ಲದೆ, ಮುಂದಿನ ತಿಂಗಳು ಫೆಬ್ರವರಿ 15
ನಂತರ ತಮ್ಮ ಅಂಗಡಿಗಳಲ್ಲಿ ಅಥವಾ ಗೋಡಾನ್‌ಗಳಲ್ಲಿ ಇಂತಹ ವಸ್ತುಗಳು ಕಂಡು ಬಂದಲ್ಲಿ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ (ಘನತ್ಯಾಜ್ಯ ವಸ್ತು ಮತ್ತು ಪ್ಲಾಸ್ಟಿಕ್ ತ್ಯಾಜ್ಯ)” ನಿಯಮ 2016 ಅಡಿಯಲ್ಲಿ ರೀತ್ಯಾ ಕನಿಷ್ಠ 100ರೂ.ಗಳು ಗರಿಷ್ಟ 5000 ರೂ.ಗಳ ವರೆಗೆ ದಂಡವನ್ನು ವಿಧಿಸಲಾಗುವುದು ಎಂದು ಎಚ್ಷರಿಕೆ ನೀಡಿದರು.
ಮಾರಾಟ ಸಂಗ್ರಹಣೆ ದಂಡ ವಿಧಿಸಿದ ನಂತರವು ಮುಂದುವರೆಸಿದ್ದಲ್ಲಿ ಕರ್ನಾಟಕ ಪುರಸಭೆ ಅಧಿನಿಯಮ 1964 ರಂತೆ ಉದ್ದಿಮೆ ಪರವಾನಗಿಯನ್ನು ( ಟ್ರೇಡ್ ಲೈಸನ್ಸ್) ರದ್ದುಪಡಿಸಿ ನಿಯಾಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದರು.
ಪ್ಲಾಸ್ಟಿಕ್ ಬಳಕೆ ಕುರಿತು ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ನಮ್ಮ ಪರಿಸರ ಹಾಗೂ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಹಾಗೂ ಅಂಗಡಿ ಮುಗ್ಗಟ್ಟು, ಕಿರಾಣಿ ಅಂಗಡಿ , ಉದ್ದಿಮೆದಾರರಿಗೆ ಕರಪತ್ರ ಹಂಚಿ ಮನದಟ್ಟು ಮಾಡಲಾಗಿದೆ ಆದ್ದರಿಂದ ಎಲ್ಲರೂ ಸಹ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿ ಎಂದು ಪಟ್ಟಣದ ನಾಗರೀಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಪರಿಸರ ಅಭಿಯಂತರೆ ರೀತುಸಿಂಗ್, ಹಿರಿಯ ಆರೋಗ್ಯ ನಿರೀಕ್ಷ ರಾಜೇಂದ್ರ, ಕಿರಿಯ ಆರೋಗ್ಯ ನಿರೀಕ್ಷಕ ಲೋಕೇಶ್ ಇದ್ದರು.
