ಕೆ.ಆರ್.ನಗರ: ತಾಲೂಕಿನ ಬೀಚನಹಳ್ಳಿಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗರತ್ನ, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಅವಿರೋಧವಾಗಿ ಆಯ್ಕೆಯಾದರು. ಸಂಘದ ಆಡಳಿತ ಕಛೇರಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ ಇಬ್ಬರನ್ನು ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಶಿವಕುಮಾರ್ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ನಿರ್ದೇಶಕರಾದ ಪದ್ಮಮ್ಮ, ತುಳಸಮ್ಮ, ಭಾಗ್ಯಮ್ಮ, ವಿಜಯ, ಭಾರತಿ, ಸುಂದ್ರಮ್ಮ, ನಾಮ ನಿರ್ದೇಶಿತ ಸದಸ್ಯೆ ಪುಷ್ಪವತಿ(ಮಂಗಳ) ಸಂಘದ ಸಿಇಒ ಸಾಕಮ್ಮ, ಹಾಲು ಪರಿವೀಕ್ಷಕಿ ಮಂಜುಳ ಇದ್ದರು. ಕಳೆದ ವಾರ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ೮ ಮಂದಿ ನಿರ್ದೇಶಕರು ಚುನಾಯಿತರಾಗಿದ್ದರು.
ಅಧ್ಯಕ್ಷೆ ನಾಗರತ್ನ ಮಾತನಾಡಿ ಕಳೆದ ೧೯ ವರ್ಷಗಳಿಂದ ಸಂಘದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಹಾಲು ಸರಬರಾಜುದಾರರಿಗೆ ಸರ್ಕಾರದಿಂದ ಮತ್ತು ಮೈಮುಲ್ ವತಿಯಿಂದ ದೊರೆಯುವ ಸವಲತ್ತುಗಳನ್ನು ಸಕಾಲದಲ್ಲಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಸಂಘದ ಅಧ್ಯಕ್ಷರನ್ನಾಗಿ ಆಯ್ಕೆಯಾಗಲು ಕಾರಣಕರ್ತರಾದ ಸಂಘದ ನಿರ್ದೇಶಕರಿಗೆ ಮತ್ತು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ನೂತನ ಅಧ್ಯಕ್ಷರು ಹಾಲು ಸರಬರಾಜುದಾರರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಗ್ರಾಮದಲ್ಲಿ ಬಿಎಂಸಿ ಕೇಂದ್ರ ಮತ್ತು ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದ್ದು ಇದಕ್ಕೆ ಬೇಕಾಗುವ ಅನುದಾನವನ್ನು ಕೊಡಿಸುವಂತೆ ಶಾಸಕ ಡಿ.ರವಿಶಂಕರ್ ಅವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಅರುಣ್‌ಕುಮಾರ್, ಮಾಜಿ ಸದಸ್ಯ ಎಂ.ಡಿ.ಮಹದೇವ್, ಮುಖಂಡರಾದ ಬೀಚನಹಳ್ಳಿಯಶವಂತ್, ಮಂಜುನಾಥ್, ಬಲರಾಮ, ದಿವಾಕರ್, ಬಸವರಾಜು, ರಾಜೇಗೌಡ, ಜವರೇಗೌಡ, ರಾಮೇಗೌಡ, ಕೆಂಪೇಗೌಡ, ಉಮೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದು ನೂತನ ಆಡಳಿತ ಮಂಡಳಿ ಸದಸ್ಯರನ್ನು ಅಭಿನಂದಿಸಿದರು.