ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕು ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅವಧಿಯ
ನಿರ್ದೇಶಕ ಸ್ಥಾನಕ್ಕೆ ಜ.೧೯ರಂದು ಭಾನುವಾರ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜ.೫ರಿಂದ ೧೧ರವರೆಗೆ ಬೆಳಿಗ್ಗೆ ೧೧ ಗಂಟೆಯಿoದ ಮಧ್ಯಾಹ್ನ ೩ ಗಂಟೆಯ ಒಳಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಆದ ಹುಣಸೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಅನುಸೂಯ ತಿಳಿಸಿದ್ದಾರೆ.
ಜ.೧೨ರಂದು ಬೆಳಿಗ್ಗೆ ೧೧.೩೦ಕ್ಕೆ ಬ್ಯಾಂಕಿನ ಕಛೇರಿಯಲ್ಲಿ ನಾಮಪತ್ರ ಪರಿಶೀಲನೆ ನಡೆಯಲಿದ್ದು, ವಾಪಾಸ್ಸು ಪಡೆಯಲು ಜ.೧೩ರಂದು ಸೋಮವಾರ ಬೆಳಿಗ್ಗೆ ೧೦.೩೦ರಿಂದ ಮಧ್ಯಾಹ್ನ ೩ ಗಂಟೆಯ ವರೆಗೆ ಕಾಲಾವಕಾಶ ನೀಡಲಾಗಿದೆ. ಜ.೧೪ರಂದು ಚುನಾವಣೆಗೆ ಸ್ಪರ್ದಿಸಿರುವ ಉಮೇದುವಾರರ ಪಟ್ಟಿಯನ್ನು ಚಿಹ್ನೆ ಸಹಿತ
ಬ್ಯಾಂಕಿನ ನೋಟೀಸ್ ಬೋರ್ಡ್ನಲ್ಲಿ ಪ್ರಕಟಿಸಲಿದ್ದು, ಜ.೧೯ರಂದು ಬೆಳಿಗ್ಗೆ ೯ ರಿಂದ ೪ ಗಂಟೆಯ ವರೆಗೆ
ಪಟ್ಟಣದ ಬನ್ನಿಮಂಟಪ ಬಡಾವಣೆಯಲ್ಲಿರುವ ಪಿಎಲ್‌ಡಿ ಬ್ಯಾಂಕ್ ರೈತ ಸಮುದಾಯ ಭವನದಲ್ಲಿ ಮತದಾನ
ನಡೆಯಲಿದ್ದು ಆನಂತರ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬ್ಯಾಂಕಿನ ೧೪ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಆ ಪೈಕಿ ಸಾಲ ಪಡೆದಿರುವ ಸದಸ್ಯರ ೭ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ, ಸಾಲ ಪಡೆದಿರುವ ೬ ಸ್ಥಾನಗಳು ಮೀಸಲು ವರ್ಗಕ್ಕೆ ಮತ್ತು ಸಾಲ ಪಡೆಯದಿರುವ ಸದಸ್ಯರ ೧ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆ ಪೈಕಿ ೧೪ ಕ್ಷೇತ್ರಗಳಲ್ಲಿ ಸಾಲ ಪಡೆದವರ ಕ್ಷೇತ್ರದ ಚರ‍್ನಹಳ್ಳಿ, ಹೆಬ್ಬಾಳು, ಮಳಲಿ, ಸಾಲಿಗ್ರಾಮ, ತಂದ್ರೆ, ದೊಡ್ಡಕೊಪ್ಪಲು ಮತ್ತು ಮಿರ್ಲೆ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಕ್ಕೆ ಹಾಗೂ ಸಾಲ ಪಡೆದಿರುವ ಸದಸ್ಯರ ಮೀಸಲು
ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಸ್ಥಾನಕ್ಕೆ ಭೇರ್ಯ, ಪರಿಶಿಷ್ಟ ಪಂಗಡ ಸ್ಥಾನಕ್ಕೆ ತಿಪ್ಪೂರು, ಮಹಿಳಾ ಮೀಸಲಿದೆ ಹಾಡ್ಯ, ಅಂಕನಹಳ್ಳಿ, ಹಿಂದುಳಿದ ವರ್ಗ ಎ ಗೆ ಮಂಚನಹಳ್ಳಿ, ಹಿಂದುಳಿದ ವರ್ಗ ಬಿಗೆ ಕೆ.ಆರ್.ನಗರ
ಮೀಸಲಾಗಿದ್ದು ಸಾಲ ಪಡೆಯದಿರುವ ಎಲ್ಲಾ ಸದಸ್ಯರು ಮತ ಚಲಾಯಿಸುವ ೧ ನಿರ್ದೇಶಕ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣೆಗೆ ಸ್ಪರ್ದಿಸುವ ಆಕಾಂಕ್ಷಿಗಳು ಮತ್ತು ಮತದಾರರು ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಕಾರ್ಯ ನಡೆಯುವ ದಿನಗಳಂದು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.