ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸರ್ಕಾರದಿಂದ 1 ಕೋಟಿ ರೂ ಅನುದಾನ ಮಂಜೂರು ಮಾಡಿಸಿ ಮಾವತ್ತೂರು ಗ್ರಾಮದ ಸಮಗ್ರ ಅಭಿವೃದ್ಧಿ ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಮಾವತ್ತೂರು ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಜೂರಾದ 30 ಲಕ್ಷ ರೂಗಳ ಪರಿಶಿಷ್ಟ ಕಾಲೋನಿ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಕಾಮಗಾರಿಯನ್ನು ಗ್ರಾಮಸ್ಥರು ಗುಣಮಟ್ಟದಲ್ಲಿ ಮಾಡಿಸಿಕೊಳ್ಳಬೇಕು ಎಂದರು. ಮಾವತ್ತೂರು ಗ್ರಾಮದ ಯುವಕರ ಬೇಡಿಕೆಯಂತೆ ಗ್ರಾಮದಲ್ಲಿ ಏಪ್ರಿಲ್ 14 ರೊಳಗೆ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿ ನಿರ್ಮಿಸಿ ಜಯಂತಿಯಂದು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಗ್ರಾಮ ಪರಿಮಿತಿಯ ಎಲ್ಲಾ ರಸ್ತೆಗಳು ಹದಗೆಟ್ಟಿರುವುದು ನನ್ನ ಗಮನದಲ್ಲಿದ್ದು ಕೂಡಲೇ ಮುಖ್ಯ ಮಂತ್ರಿಗಳಿಂದ ವಿಶೇಷ ಅನುದಾನ ತಂದು ಸಂಪೂರ್ಣ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರಲ್ಲದೆ ಗ್ರಾಮದ ಅಂಬೇಡ್ಕರ್ ಸಮುದಾಯ ಭವನಕ್ಕೆ 25 ಲಕ್ಷ ಅನುದಾನ ನೀಡಿ ಭವನದ ಕಾಮಗಾರಿ ಪೂರ್ಣಗೊಳಿಸಲು ಬದ್ದನಿದ್ದೇನೆ ಎಂದು ತಿಳಿಸಿದರು.
ಗ್ರಾ.ಪಂ. ಸದಸ್ಯರಾದ ದೇವಯ್ಯ, ಲೋಹಿತ್, ಭವ್ಯಶಂಕರ್, ಮಾಜಿ ಸದಸ್ಯ ಉಮೇಶ್, ಸೊಮಯ್ಯ, ಮುಖಂಡರಾದ ಗಣೇಶ್.ಎಂ.ಎನ್, ಶಿವಯ್ಯ, ಹರೀಶ್, ರಾಮು, ಮಂಜುನಾಥ್ ಅಣ್ಣಯ್ಯ, ರಂಗೇಶ್ ಕುಮಾರ್, ವಿಜಯ್, ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ಪಿಡಿಒ ಧನಂಜಯ್ ಸೇರಿದಂತೆ ಇನ್ನಿತರರು ಇದ್ದರು.