ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ :ಕೆಆರ್.ನಗರ ಪಟ್ಟಣದ ಶೇ ೯೦ ಭಾಗಕ್ಕೆ ಕಾವೇರಿ ನದಿ ನೀರು ಪೂರೈಕೆ ಯಾಗುತ್ತದೆ. ಆದರೆ ಕಾವೇರಿ ನದಿಯಲ್ಲಿ ಕಳೆದ ೩-೪ ದಿನದಿಂದ ಪಟ್ಟಣದ ಜನತೆಗೆ ಕೆಂಪು ಮಿಶ್ರಿತ ಕುಡಿಯುವ ನೀರು ಮನೆಗೆ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಇಂದು ಶಾಸಕ ಡಿ.ರವಿಶಂಕರ್ ಹಳೆ ಎಡತೊರೆಯ ಕಾವೇರಿ ನದಿಯ ದಡದಲ್ಲಿರುವ ಪಂಪ್ ಹೌಸ್ (ಶುದ್ಧೀಕರಣ ಮಾಡುವ ಘಟಕ) ಗೆ ಭೇಟಿ ನೀಡಿ ಪರಿಶೀಲಿಸಿದರು.

ಪಟ್ಟಣದ ಜನತೆ ಈ ರೀತಿಯ ಕೆಂಪು ಬಣ್ಣದ ಮಿಶ್ರಿತ ನೀರೇ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ ಇದು ಎಷ್ಟು ದಿನದಿಂದ ಜನ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದು ಪುರಸಭಾ ಅಧಿಕಾರಿಗಳಿಗೆ ತರಾಟೆ ತೆಗೆದು ಕೊಂಡ ಶಾಸಕರು ವಾರದೊಳಗೆ ಶುದ್ದೀಕರಣ ಮಾಡಿದ ನೀರನ್ನು ಪಟ್ಟಣದ ಜನತೆ ಪೂರೈಕೆ ಮಾಡದಿದ್ದರೆ ನಿಮ್ಮ ಕಚೇರಿ ಮುಂದೆ ಧರಣಿ ಮಾಡುವುದಾಗಿ ಪುರಸಭೆಯ ಆಡಳಿತ ಅಧಿಕಾರಿಯಾಗಿರುವ ಹುಣಸೂರಿನ ಉಪವಿಭಾಗಾಧಿಕಾರಿ ಮಹಮ್ಮದ್ ಹಾರೀಸ್ ಸುಮೈರ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ತಾಕೀತು ಮಾಡಿದರು.
ನಿಮಗೆ ಸ್ವಲ್ಪಮಟ್ಟಿಗೆ ಜವಾಬ್ದಾರಿ ಇರಬೇಕು ಪಟ್ಟಣದ ಪುರಸಭೆ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ನೀವು ಅಧಿಕಾರಿಗಳ ಜೊತೆ ಸಂಪರ್ಕದಲ್ಲಿ ಇದ್ದು ಪಟ್ಟಣದ ಕುಂದು ಕೊರತೆ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಕೆಲಸ ಮಾಡ ಬೇಕು ಈಗಾಗಲೇ ಮೈಸೂರು ತಾಲ್ಲೂಕಿನಲ್ಲಿ ಆಗಿರುವ ಘಟನೆ ಸಾಕು ಈಗಾಲಾದರು ಎಚ್ಚೆತ್ತು ಪಟ್ಟಣಕ್ಕೆ ಶುದ್ದೀಕರಣ ಮಾಡಿದ ಕುಡಿಯುವ ನೀರನ್ನು ಪೂರೈಕೆ ಮಾಡಿಸಿ ಎಂದರು.
ಪಟ್ಟಣದ ೨೩ ವಾರ್ಡ್ ಗಳಲ್ಲಿರುವ ಕುಡಿಯುವ ನೀರಿನ ಬೊರ್‌ವೆಲ್‌ಗಳ ನೀರಿನ ಅಂಶಗಳನ್ನು ಪರೀಕ್ಷಿಸಿ ನಂತರ ಯೋಗ್ಯವಾಗಿದ್ದರೆ ಜನತೆ ಕುಡಿಯುವ ನೀರು ಒದಗಿಸಿ ಇಲ್ಲದಿದ್ದಲ್ಲಿ ಆ ಬೋರ್ ವೆಲ್ ಬಂದ್ ಮಾಡಿದ ಎಂದರಲ್ಲದೆ. ಈಗಾಗಲೇ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಸಭೆ ಕರೆದು ಶುದ್ಧೀಕರಣ ನೀರು ಪೂರೈಕೆ ಸಂಬAದ ಸಭೆ ಮಾಡಿದ್ದಾರೆ, ನಾವು ಹೇಳುವುದು ಏನೂ ಇಲ್ಲ, ಮುನ್ನೆಚ್ಚರಿಕೆ ಕ್ರಮ ವಹಿಸಿ ಕೆಲಸ ಮಾಡಿ ಇಲ್ಲದಿದ್ದರೆ ವರ್ಗಾವಣೆ ಮಾಡಿಸಿ ಕೊಂಡು ಹೋಗಿ ಎಂದು ಖಡಕ್ ಎಚ್ಚರಿಕೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಐದಾರು ವರ್ಷಗಳಿಂದ ಪಂಪ್ ಹೌಸ್ ನಲ್ಲಿರುವ ಶುದ್ದೀಕರಣ ಘಟಕ ಕೆಟ್ಟಿದೆ, ಶಾಶ್ವತ ಪರಿಹಾರಕ್ಕಾಗಿ ಈಗಾಗಲೇ ಎರಡು ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ, ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮುಗಿದ ಕೂಡಲೇ ಟೆಂಡರ್ ಪ್ರಕ್ರಿಯೆ ಮಾಡಿ ತಕ್ಷವೇ ಕಾಮಗಾರಿ ಮಾಡಿಸಲಾಗುವುದು ಎಂದರು. ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಲ್ಲಿ ಕೆಂಪು ಬಣ್ಣದ ಮಿಶ್ರಿತ ನೀರು ಬರುತ್ತಿದೆ ಕಾಯಿಸಿದ ನೀರು ಬಳಕೆ ಮಾಡಿ ಎಂದು ಪುರಸಭೆ ಸ್ವಚ್ಚತಾ ವಾಹನಗಳ ಮೂಲಕ ಪ್ರಚಾರ ಮಾಡಿಸಿದ್ದಾರೆ ಎಂದರು.
ಕಾವೇರಿ ನದಿಯಿಂದ ನೀರು ಶುದ್ದೀಕರಣ ಮಾಡಿಯೇ ಪೂರೈಸುತ್ತೇವೆ. ಮಳೆ ಬಂದು ನದಿಯಲ್ಲಿ ಮಣ್ಣು ಮಿಶ್ರಿತ ನೀರು ಬರುತ್ತದೆ. ಹೀಗಾಗಿ ಫಿಲ್ಟರ್ ಸಮಸ್ಯೆ ಇದೆ, ಹಾಗೇ ಪೂರೈಕೆ ಆಗುತ್ತಿದೆ. ಆಲಂ, ಬ್ಲಿಚಿಂಗ್ ಪೌಡರ್ ಹಾಕಲಾಗುತ್ತಿದೆ. ನದಿಯಲ್ಲಿ ಹೊಸ ನೀರು ಮಣ್ಣು ಮಿಶ್ರಿತವಾಗಿ ಬರುತ್ತಿರುವುದು ಹೀಗಾಗಿದೆ ಎಂದು ಪಟ್ಟಣದ ಅಧಿಕಾರಿಗಳಿಂದ ಮಾಹಿತಿ ಪಡೆದ ಕೊಂಡ ಶಾಸಕ ಡಿ.ರವಿಶಂಕರ್, ಇಷ್ಟು ದಿನವಾದರು ನನ್ನ ಗಮನಕ್ಕೆ ಏಕೆ ಸಮಸ್ಯೆ ತಂದಿಲ್ಲ ಎಂದು ಪುರಸಭೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ, ಇಂಜಿನಿಯರ್ ಸೌಮ್ಯ, ಚಂದ್ರಶೇಖರ್, ಪರಿಸರ ಅಭಿಯಂತರೆ ರೀತುಸಿಂಗ್, ಕಿರಿಯ ಆರೋಗ್ಯ ನಿರೀಕ್ಷಕ ಲೋಕೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇಶಕರಾದ ಸೈಯದ್ ಜಾಬೀರ್, ಪುರಸಭಾ ಸದಸ್ಯರಾದ ಕೆ.ಜಿ.ಸುಬ್ರಹ್ಮಣ್ಯ(ಓಮ), ಕೋಳಿ ಪ್ರಕಾಶ್, ಜಾವೀದ್ ಪಾಷ, ನಟರಾಜು, ಶಂಕರ್ ಸ್ವಾಮಿ, ಮಿಕ್ಸರ್ ಶಂಕರ್, ಮಾಜಿ ಅಧ್ಯಕ್ಷ ನರಸಿಂಹರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯ್ ಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ಮುಖಂಡರಾದ ವೈ.ಎಸ್.ಕುಮಾರ್, ಎಸ್.ವಿ.ಎಸ್. ಸುರೇಶ್, ಪುಟ್ಟರಾಜು, ಲೋಕೇಶ್, ನವೀದ್, ಆದರ್ಶ ಸೇರಿದಂತೆ ಇನ್ನಿತರರು ಹಾಜರಿದ್ದರು.