ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಘಟಕ, ಐಸೋಲೇಶನ್ ಕೊಠಡಿ , ಆಂಬುಲೆನ್ಸ್ ಲೋಕಾರ್ಪಣೆ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 1 ಕೋಟಿ ರೂ ಮಂಜೂರಾಗಿದ್ದು ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.
ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಘಟಕ, ಐಸೋಲೇಶನ್ ಕೊಠಡಿ ಉದ್ಘಾಟಿಸಿ ಜತೆಗೆ ಆಂಬುಲೆನ್ಸ್ ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು ಕೆ. ಆರ್. ನಗರ ಆಸ್ಪತ್ರೆಯಲ್ಲಿ 5 ಮತ್ತು ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ 2 ಡಯಾಲಿಸಿಸ್ ಘಟಕಗಳು ಕಾರ್ಯಾರಂಭ ಮಾಡಲಿವೆ ಎಂದರು.

ಕ್ಷೇತ್ರದ ವ್ಯಾಪ್ತಿಯ ಜನರಿಗೆ ಆರ್ಥಿಕ ಹೊರೆಯಾಗದಂತೆ ಡಯಾಲಿಸಿಸ್ ಸೇವೆ ಒದಗಿಸಲಾಗಿದ್ದು ಮುಂದೆ ಬೇರ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸುವುದರ ಜತೆಗೆ ಸಾಲಿಗ್ರಾಮದಲ್ಲಿ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ಆರಂಬಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೇ ಮಂಜೂರಾತಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜೊತೆ ಚರ್ಚಿಸಿದ್ದು ಜರುರಾಗಿ ಬೇಡಿಕೆಗೆ ಸ್ಪಂದಿಸುವುದಾಗಿ ಅವರು ಉತ್ತರಿಸಿದ್ದು ನಾನು ತ್ವರಿತವಾಗಿ ಈ ಕೆಲಸವನ್ನು ಕಾರ್ಯಗತ ಮಾಡುತ್ತೇನೆಂದು ನುಡಿದರು.
ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂತರ ಸಾಲಿಗ್ರಾಮ ಮತ್ತು ಕೆ. ಆರ್. ನಗರ ತಾಲೂಕು ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಬಗೆಹರಿಸಲು ಕೆಲಸ ಮಾಡುತ್ತೇನೆಂದು ಮಾಹಿತಿ ನೀಡಿದರು.
ಎರಡು ತಾಲೂಕುಗಳಲ್ಲಿ ಡೆಂಗ್ಯೂ ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆಯ ಸಿಬ್ಬಂದಿ ಸೂಕ್ತ ಕಟ್ಟು ನಿಟ್ಟಿನ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಈ ಸಂಬಂಧ ಯಾವುದೇ ದೂರು ಮತ್ತು ಸಲಹೆಗಳಿದ್ದರು ಸಾರ್ವಜನಿಕರು ಆರೋಗ್ಯ ಇಲಾಖೆ ಮತ್ತು ನನ್ನನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.
ಜುಲೈ 9,ರಂದು ಮಂಗಳವಾರ ಕೆಡಿಪಿ ಸಭೆ ಕರೆಯಲಾಗಿದ್ದು ಅಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಮತ್ತು ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಸೂಚನೆ ನೀಡಿ ಡೆಂಗ್ಯೂ ಹರಡುವುದನ್ನು ತಡೆಯಲು ಮತ್ತಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡುತ್ತೇನೆ ಎಂದರು.
ಕೆ. ಆರ್. ನಗರ ಸಾರ್ವಜನಿಕ ಆಸ್ಪತ್ರೆ ಮತ್ತು ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಕ್ಷೇತ್ರದ ವ್ಯಾಪ್ತಿಯ ಇತರ ಎಲ್ಲಾ ಆಸ್ಪತ್ರೆಗಳಿಗೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಲು ನಾನು ಮುಖ್ಯಮಂತ್ರಿ ಮತ್ತು ಉಪ-ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಇದರೊಂದಿಗೆ ಆರೋಗ್ಯ ಸಚಿವರನ್ನು ಮನವಿ ಮಾಡಿ ಅಗತ್ಯ ಅನುದಾನ ತಂದು ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಗಂಧನಹಳ್ಳಿವೆಂಕಟೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಹೆಚ್. ಹೆಚ್. ನಾಗೇಂದ್ರ, ಲೋಕೇಶ್, ಮಂಜು ಕೆಂಚಿ, ನಾಗರತ್ನಮ್ಮ, ಸಾಗರ್, ಪುರಸಭೆ ಸದಸ್ಯರಾದ ಶಿವು ನಾಯಕ್, ನಟರಾಜು, ಪ್ರಕಾಶ್, ಮಾಜಿ ಸದಸ್ಯ ಕೆ. ವಿನಯ್, ಮದು, ಆಸ್ಪತ್ರೆಯ ಆಡಳಿತಾ ಧಿಕಾರಿ ಡಾ. ಬಿ.ಜೆ. ನವೀನ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಡಿ. ನಟರಾಜು, ಡಾ.ಶಿವಶಂಕರ್, ಡಾ.ತೇಜುಮಣಿ, ಡಾ.ದರ್ಶನ್, ಡಾ.ಕಿಶೋರ್, ಡಾ.ಶ್ರೀಕಾಂತ್, ಡಾ.ಗೌತಮ್, ಡಾ.ಶಾಂತಕುಮಾರ್, ಡಾ.ಭವಾನಿ, ತಾಲೂಕು ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಕೆ.ವಿ.ರಮೇಶ್ ಮತ್ತಿತರರು ಹಾಜರಿದ್ದರು.