ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಅಯೋದ್ಯ ದೇಗುಲದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಭಕ್ತ ಸಾಗರವೇ ಹರಿದು ಬಂದು ದೇವರ ದರ್ಶನ ಪಡೆದು ಭಕ್ತಿ ಭಾವದಲ್ಲಿ ಹರ್ಷೋದ್ಘಾರಿಸಿದರು.
ಇತಿಹಾಸ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳ ಶ್ರೀ ಕ್ಷೇತ್ರ ಚುಂಚನಕಟ್ಟೆ ಗ್ರಾಮದಲ್ಲಿನ ಶ್ರೀ ರಾಮ ದೇವಾಲಯದಲ್ಲಿ ಮುಂಜಾನೆಯಿಂದಲೇ ಅರ್ಚಕ ವೃಂದ ಸುಪ್ರಭಾತ, ಹಾಲು-ಮೊಸರು, ಅರಿಶಿನ-ಕುಂಕುಮ, ಎಳನೀರು, ಪಂಚಾಮೃತಾಭಿಷೇಕ ಸೇರಿದಂತೆ ಪವಿತ್ರ ಕಾವೇರಿ ನೀರಿನಿಂದ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನ ಮೂಲ ಮೂರ್ತಿಗಳಿಗೆ ಜಲಾಭಿಷೇಕ ಮಾಡಿದರು.
ನಂತರ ಹಲವು ಬಗೆಯ ಪುಷ್ಪಗಳ ತೋ ಮಾಲಾ ಅಲಂಕರಿಸಿ, ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ನಂತರ ಭಕ್ತಸಮೂಹ ಸಮ್ಮುಖದಲ್ಲಿ ದೇವರಿಗೆ ಮಹಾ ಮಂಗಳಾರತಿ ನೆರವೇರಿಸಿದ ಅರ್ಚಕರು ಬಳಿಕ ಬಂದಿದ್ದ ಭಕ್ತರಿಗೆ ತೀರ್ಥ, ಪ್ರಸಾದ ನೀಡಿದರು.
ಇನ್ನು ಶೃಂಗಾರಗೊಂಡಿದ್ದ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿ ಮೂಲಕ ಭಕ್ತ ಸಮೂಹ ಗೋವಿಂದಾ ಗೋಪಾಲ ಎಂಬ ಮಂತ್ರ ಪಠಣದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ನಡೆಸಲಾಯಿತು.
ಗ್ರಾಮಸ್ಥರು ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯ ಭಕ್ತರು ಸಂಜೆವರೆಗೂ ತಂಡೋಪತಂಡವಾಗಿ ದೇಗುಲಕ್ಕೆ ಆಗಮಿಸಿ ಸುಡುವ ಬಿಸಿಲನ್ನು ಲೆಕ್ಕಿಸಿದೆ ಮಹಿಳೆಯರು, ಮಕ್ಕಳು, ವೃದ್ಧರು ಸರತಿ ಸಾಲಿನಲ್ಲಿ ನಿಂತು ದೇವರಿಗೆ ಹಣ್ಣು, ಕಾಯಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಸೆಲ್ಫಿ ಜೋರು:– ಶ್ರೀರಾಮ ದೇಗುಲಕ್ಕೆ ಶ್ರೀರಾಮ, ಲಕ್ಷ್ಮಣ ಹಾಗೂ ಸೀತೆ ವೇಷ ಧರಿಸಿ ದೇಗುಲಕ್ಕೆ ಆಗಮಿಸಿದ ಪುಟಾಣಿ ಮಕ್ಕಳು ಎಲ್ಲರ ಗಮನಸೆಳೆಯಿತು ಅಷ್ಟೇ ಅಲ್ಲದೆ ಕೆಲವರು ಸೆಲ್ಫಿ ಫೋಟೋ ಗೆ ಮುಗಿಬಿದ್ದ ದೃಶ್ಯ ಕಂಡು ಬಂತು. ಈ ಸಂದರ್ಭದಲ್ಲಿ ದೇಗುಲದ ಇ ಒ ರಘು, ಪಾರುಪತ್ತೆದಾರ ಯತಿರಾಜು, ಅರ್ಚಕರಾದ ನಾರಾಯಣ ಅಯ್ಯಂಗಾರ್, ವಾಸುದೇವನ್ ಸೇರಿದಂತೆ ಮತ್ತಿತರರು ಹಾಜರಿದ್ದರು

ಎಲ್ಲೆಡೆ ಪೂಜೆ: ಇನ್ನು ಅಯೋದ್ಯೆ ದೇಗುಲದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಚುಂಚನಕಟ್ಟೆ ಹೋಬಳಿಯಾದ್ಯಂತ ಗ್ರಾಮಗಳ ದೇಗುಲ ಹಾಗೂ ಮುಖ್ಯ ರಸ್ತೆಗಳಲ್ಲಿ ಗ್ರಾಮದ ಮುಖಂಡರು ಹಾಗೂ ಯುವಕರು ಶ್ರೀರಾಮ ಭಾವಚಿತ್ರ ಇಟ್ಟು ಪೂಜಿಸಿ ದಾರಿ ಹೋಗಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ಬಾತ್ ಸೇರಿದಂತೆ ವಿವಿಧ ಬಗೆಯ ಪ್ರಸಾದವನ್ನು ನೀಡಿದರು.ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದ ಹಳಿಯೂರು ಬಡಾವಾಣೆಯಲ್ಲಿ ಶ್ರೀರಾಮ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು .ವಕೀಲ ಸಂಘದ ಉಪಾಧ್ಯಕ್ಷ ಹೊಸೂರು ಎಚ್.ಎಸ್.ಚೇತನ್, ಉದ್ಯಮಿಗಳಾದ ರಾಕೇಶ್,ರಕ್ಷೀತ್,ಬಾಲು,ಸುನೀಲ್,ನವೀನ್ ಸೇಠು ,ಕಲ್ಯಾಣ್ ಸೇಠು ಯುವ ಮುಖಂಡರಾದ ಸಾಗರ್, ಕಾಡು ರಂಗಸ್ವಾಮಿ,ಗದ್ದಿಗೆ ವೆಂಕಟೇಶ್ ಇದ್ದರು
