ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ದಲಿತ ಮುಖಂಡ ವಿ.ಶ್ರೀನಿವಾಸಪ್ರಸಾದ್ ಅವರು ರಾಜಕೀಯ ಕ್ಷೇತ್ರದ ದೊಡ್ಡ ಆಲದ ಮರವಾಗಿದ್ದು ಅವರ ಆಶ್ರಯದಲ್ಲಿ ಸಾವಿರಾರು ಮಂದಿ ಬದುಕಿ ಸಮಾಜಕ್ಕೆ ಆಸ್ತಿ ಮತ್ತು ಮಾದರಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ನುಡಿದರು.
ಕೆ.ಆರ್.ನಗರ ಪಟ್ಟಣದ ಹೆಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಜೆಡಿಎಸ್ ಮತ್ತು ವಿ.ಶ್ರೀನಿವಾಸಪ್ರಸಾದ್ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ವಿ.ಶ್ರೀನಿವಾಸಪ್ರಸಾದ್ ಒಂದು ನೆನಪು ಕಾರ್ಯಕ್ರಮವನ್ನು ವಿ.ಶ್ರೀನಿವಾಸಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ದೇಶದ ದಲಿತ ನಾಯಕರ ಸಾಲಿನಲ್ಲಿ ಅಗ್ರಪಂಕ್ತಿ ನಾಯಕರ ಸಾಲಿಗೆ ನಿಲ್ಲುವ ಅವರ ಜೀವನ ಮತ್ತು ಸಾಧನೆ ಇತರ ರಾಜಕೀಯ ನಾಯಕರಿಗೆ ಅನುಕರಣೀಯ ಮತ್ತು ಮಾದರಿಯಾಗಿದ್ದು ಅಂತಹಾ ಅಸಮಾನ್ಯ ವ್ಯಕ್ತಿ ನಮ್ಮ ನಾಡಿನಲ್ಲಿ ಜನಿಸಿದ್ದು ಎಲ್ಲರ ಪುಣ್ಯ ವಿಶೇಷ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮರನ್ನು ಗುರುತಿಸಿ ಮಾರ್ಗದರ್ಶನ ಮಾಡುತ್ತಿದ್ದ ಅವರ ಗುಣ ಸರ್ವತ್ರ ಪ್ರಸ್ತುತವಾಗಿದ್ದು ಜಾತ್ಯಾತೀತ ಸಮಾಜ ನಿರ್ಮಾಣವಾಗಬೇಕಾದರೆ ಭವಿಷ್ಯದಲ್ಲಿ ನಾವೆಲ್ಲರೂ ವಿ.ಶ್ರೀನಿವಾಸಪ್ರಸಾದರ ಆದರ್ಶ ಗುಣಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಲಹೆ ನೀಡಿದರು.
ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವುದರ ಜತೆಗೆ ಅಕ್ಷರ ದಾಸೋಹ ಯೋಜನೆ ಜಾರಿಗೆ ತರುವುದರ ಹಿಂದೆ ಇವರ ಸಲಹೆ ಮತ್ತು ಸಹಕಾರ ಅಪಾರವಾಗಿದ್ದು ಪ್ರಸಾದ್ ಮತ್ತು ನನ್ನ ನಡುವಿನ ಬಾಂಧವ್ಯ ಮೊಗೆದಷ್ಟು ಹಸಿರಾಗಿದ್ದು ಅಂತ ರಾಜಕೀಯ ನಾಯಕ ಅತ್ಯಂತ ಅಪರೂಪವಾಗಿದ್ದು ದಿವಂಗತರ ನೆನಪು ಎಲ್ಲರಿಗೂ ಅಜರಾಮರವಾಗಿರಲಿ ಎಂದರು.
ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಹಾಗೂ ದಲಿತ ಮುಖಂಡ ಹನಸೋಗೆ ನಾಗರಾಜು ಮಾತನಾಡಿ ಮಾಜಿ ಸಚಿವ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಬಾಬಾ ಸಾಹೇಬ್ ಡಾ.ಬಿಆರ್. ಅಂಬೇಡ್ಕರ್ ಅವರಂತೆ ಸ್ವಾಭಿಮಾನಿ ಆಗಿದ್ದವರು, ದಕ್ಷಿಣ ಕರ್ನಾಟಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಎಂದೇ ಹೆಸರನ್ನು ಪಡೆದಿದ್ದವರು ಎಂದು ದಿವಂಗತ ಸಂಸದ ಶ್ರೀನಿವಾಸ್‌ಪ್ರಸಾದ್ ಅವರ ಒಡನಾಟವದ ಬಗ್ಗೆ ಬಣ್ಣಿಸಿದರು.
ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು, ಬದುಕಿನುದ್ದಕ್ಕೂ ಅದರಂತೆ ಬದುಕಿನ ಸ್ವಾಭಿಮಾನಿ ರಾಜಕಾರಣಿಯಾಗಿದ್ದವರು ದಲಿತ, ಹಿಂದುಳಿದ ವರ್ಗದ ದೊಡ್ಡ ಶಕ್ತಿಯಾಗಿದ್ದರು. ಅಂಬೇಡ್ಕರ್ ಸಿದ್ಧಾಂತಗಳನ್ನು ಪಾಲಿಸುತ್ತಿದ್ದ ಅವರು, ಸಂವಿಧಾನಕ್ಕೆ ತೊಂದರೆ ಎದುರಾದಾಗ ಹೋರಾಡುತ್ತಿದ್ದರು. ತಮ್ಮ ೫೦ ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ರಾಜಿಯಾಗದೆ, ತಮ್ಮ ಸಿದ್ಧಾಂತ, ನಂಬಿಕೆಗಳಿಗೆ ಬದ್ಧವಾಗಿದ್ದವರು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಹಾಗೂ ದಲಿತ ಮುಖಂಡ ಹನಸೋಗೆ ನಾಗರಾಜು, ತಾ.ಪಂ. ಮಾಜಿ ಅಧ್ಯಕ್ಷೆ ಭಾಗ್ಯಶಂಕರ್, ವಕೀಲ ಅಂಕಹಳ್ಳಿತಿಮ್ಮಪ್ಪ, ತಾ.ಪಂ. ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್, ಸದಸ್ಯರಾದ ಇ.ರಾಮಪ್ಪ, ಎಂ.ತಮ್ಮಣ್ಣ, ಜೆಡಿಎಸ್ ದಲಿತ ಮೋರ್ಚಾ ತಾಲೂಕು ಅಧ್ಯಕ್ಷ ಹಂಪಾಪುರ ಸೂರಿ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಮುಖಂಡರಾದ ಭೇರ್ಯ ಸೋಮು, ವೆಂಕಟೇಶ್, ಅಶೋಕ್, ಮಹದೇವಯ್ಯ, ಬಿ.ಡಿ.ರೇವಣ್ಣ, ಗೋವಿಂದರಾಜು, ಮೋಹನ್ ಮತ್ತಿತರರು ಇದ್ದರು.