ಕೆ ಆರ್ ಪೇಟೆ: ಪಟ್ಟಣ ಪುರಸಭೆ ವ್ಯಾಪ್ತಿಯ 17 ನೇ ವಾರ್ಡ್ ನ ಪುರಸಭೆ ಖಾಲಿ ಜಾಗಕ್ಕಾಗಿ ಸದಸ್ಯರ ನಡುವೆ ಸರಿರಾತ್ರಿ ಕಿತ್ತಾಟವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ. ಪುರಸಭೆ ಸದಸ್ಯ ಸಂತೋಷ್ ಹಾಗೂ ಎಚ್.ಆರ್ ಲೋಕೇಶ್ ನಡುವೆ ಕಿತ್ತಾಟ ನಡೆದಿದೆ.
ಈ ಜಾಗವನ್ನು ಅಕ್ರಮವಾಗಿ ಪುರಸಭೆ ಸದಸ್ಯ ಲೋಕೇಶ್ ಹಾಗೂ ಎಂ.ಡಿ.ಸಿ.ಸಿ ಅಧ್ಯಕ್ಷ ಹರೀಶ್ ರ ಹೆಸರಿಗೆ ನಕಲಿ ಖಾತೆ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದ್ದು, ಈ ಖಾಲಿ ನಿವೇಶನದ ಅಕ್ರಮದ ಬಗ್ಗೆ ವಾರ್ಡ್ ನ ಸದಸ್ಯ ಸಂತೋಷ್ ಗೆ ಮಾಹಿತಿ ತಿಳಿದಿದ್ದು, ಆ ಜಾಗದಲ್ಲಿ ಚರಂಡಿ ನಿರ್ಮಾಣ ಮಾಡಲು ಜೆಸಿಬಿಯಿಂದ ಸಂತೋಷ್ ಗುಂಡಿ ತೆಗೆಸಿದ್ದರು. ಈ ವೇಳೆ ಈ ಜಾಗ ತಮ್ಮದೆಂದು ರಾತ್ರೋರಾತ್ರಿ ಗುಂಡಿ ಮುಚ್ಚಿಸಲು ಸದಸ್ಯ ಲೋಕೇಶ್ ಹಾಗೂ ಹರೀಶ್ ಯತ್ನ ಮಾಡಿದ್ದಾರೆ .
ಈ ವೇಳೆ ಇಬ್ಬರು ಸದಸ್ಯರ ನಡುವೆ ರಾತ್ರೋರಾತ್ರಿ ಮಾತಿನ ಚಕಮಕಿ ನಡೆದಿದ್ದು, ಸದಸ್ಯರ ಕಿತ್ತಾಟ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಮಧ್ಯಸ್ಥಿಕೆ ವಹಿಸಿದರು .ಈ ವಿಚಾರದಲ್ಲಿ ಸದಸ್ಯ ಸಂತೋಷ್ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಪುರಸಭೆ ಮುಖ್ಯಾಧಿಕಾರಿಗೆ ಈ ಜಾಗದ ವಿಚಾರವಾಗಿ ದೂರು ಸಲ್ಲಿಸಿದ್ದಾರೆ . ಕೆ.ಆರ್.ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.