ಬೆಂಗಳೂರು: ರೈತರ ಬಗ್ಗೆ ಕೀಳರಿಮೆ ಇರುವ ಕೃಷ್ಣ ಭೈರೇಗೌಡರು ಐದು ವರ್ಷಗಳ ಕಾಲ ಕೃಷಿ ಸಚಿವರಾಗಿದ್ದು ಈ ರಾಜ್ಯದ ದೌರ್ಭಾಗ್ಯ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಮ್ಮ ಬಗ್ಗೆ ಆಡಿದ ಮಾತಿನ ಬಗ್ಗೆ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ನನ್ನನ್ನು ನಿಂದಿಸುವ ಭರದಲ್ಲಿ ಕಡಲೆಕಾಯಿ ಬೆಳೆಯುವ ಸಾಮಾನ್ಯ ರೈತನಿಗೆ ಇರುವಷ್ಟು ಕನಿಷ್ಠ ಜ್ಞಾನ ಎಂದು ರೈತರನ್ನು ಕೃಷ್ಣ ಭೈರೇಗೌಡರು ಹೀಯಾಳಿಸಿದ್ದಾರೆ. ಎಲ್ಲರಿಗೂ ಅವರಂತೆ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಿಕೊಂಡು ಬರುವಷ್ಟು ಅನುಕೂಲ ಇರುವುದಿಲ್ಲ. ರಾಜಕಾರಣದಲ್ಲಿ ಕುಟುಂಬದ ಹಿನ್ನೆಲೆ ಇಲ್ಲದಂತಹ ನಮ್ಮಂತಹ ಸಾಮಾನ್ಯರೂ ಇದ್ದೀವಿ. ರೈತರ ಬಗ್ಗೆ ಇಂತಹ ಕೀಳರಿಮೆ ಇರುವ ತಮ್ಮಂತಹವರು ಐದು ವರ್ಷಗಳ ಕಾಲ ರಾಜ್ಯದ ಕೃಷಿ ಸಚಿವರಾಗಿದ್ದೀರಲ್ಲ, ಅದೇ ನಮ್ಮ ರಾಜ್ಯದ ದೌರ್ಭಾಗ್ಯ ಎಂದು ಹೇಳಿದ್ದಾರೆ.
ಜಿಎಸ್‌ಟಿ ಸಭೆಯಲ್ಲಿ ತೆರಿಗೆ ಹಂಚಿಕೆ ಬಗ್ಗೆ ಅಧಿಕೃತವಾಗಿ ಚರ್ಚೆ ನಡೆಯುವುದಿಲ್ಲ ಎಂಬ ಅರಿವು ನನಗೂ ಇದೆ. ಆದರೆ ಜಿಎಸ್‌ಟಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಅಥವಾ ಇನ್ಯಾರಾದರೂ ಪ್ರತಿನಿಧಿ ಸಚಿವರು ಬಂದಿರುತ್ತಾರೆ ಅಲ್ಲವೇ ಇಂತಹ ವೇದಿಕೆಯಲ್ಲಿ ಅನೌಪಚಾರಿಕವಾಗಿ ತೆರಿಗೆ ಹಂಚಿಕೆ ಬಗ್ಗೆ ಚರ್ಚಿಸಿ ಒಂದು ಒಮ್ಮತ ಸೃಷ್ಟಿಸುವ ಪ್ರಯತ್ನ ಮಾಡಬಹುದಿತ್ತಲ್ಲವೇ? ನನ್ನ ಮಾತಿನ ಅರ್ಥ ಇದಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮನೆಹಾಳು ಕೆಲಸ ಮಾಡಬಾರದು. ಇವತ್ತು ನೀವು ?ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತೀರಿ. ನಾಳೆ ಬೆಂಗಳೂರಿನ ಜನತೆ ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತಾರೆ. ಮುಂದೊಂದು ದಿನ ಮಹದೇವಪುರದ ಜನ ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತಾರೆ. ಹೀಗೆ ಮುಂದುವರಿದರೆ ಪ್ರತಿಯೊಂದು ಧರ್ಮ, ಜಾತಿಯವರು ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತಾರೆ. ಹೀಗಾದರೆ ಇದಕ್ಕೆ ಕೊನೆ ಎಲ್ಲಿ ಎಂದು ಆರ್.ಅಶೋಕ ಪ್ರಶ್ನಿಸಿದ್ದಾರೆ.
ಇದೆಲ್ಲಾ ತಮಗೆ ಗೊತ್ತಿಲ್ಲ ಎಂದೇನಿಲ್ಲ. ಬಹುಶಃ ಅತಿ ಬುದ್ಧಿವಂತಿಕೆ ಪ್ರದರ್ಶನ ಮಾಡುವ ಮೂಲಕ ಹೈಕಮಾಂಡ್ ಗಮನ ಸೆಳೆದು ಮುಖ್ಯಮಂತ್ರಿ ಕುರ್ಚಿಗೆ ನನ್ನದೂ ಒಂದು ಇರಲಿ ಅಂತ ಟವಲ್ ಹಾಕುತ್ತಿರಬಹುದು. ದುರಾಡಳಿತದಿಂದ ಬೇಸತ್ತಿರುವ ಕರ್ನಾಟಕಕ್ಕೆ ನಿಮ್ಮಂತಹ ಸುಶಿಕ್ಷಿತ, ಸಭ್ಯ, ಬುದ್ಧಿವಂತ ನಾಯಕರು ಮುಖ್ಯಮಂತ್ರಿ ಆದರೆ ಒಳ್ಳೆಯದೇ! ಆದರೆ ನಿಮ್ಮ ಕಾಂಗ್ರೆಸ್ ಹೈಕಮಾಂಡ್‌ಗೆ ಬೇಕಾಗಿರುವುದು ಸಂಪನ್ಮೂಲ ಒದಗಿಸುವ ಮಹಾನಾಯಕರೇ ಹೊರತು ನಿಮ್ಮಂತಹ ಸಂಪನ್ಮೂಲ ವ್ಯಕ್ತಿಗಳಲ್ಲ. ಒಟ್ಟಿನಲ್ಲಿ ನಿಮಗೆ ಶುಭವಾಗಲಿ ಎಂದು ವ್ಯಂಗ್ಯವಾಡಿದ್ದಾರೆ.