ಬೆಂಗಳೂರು: ನಾಡಿನೆಲ್ಲೆಡೆ ಇಂದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ. ಶ್ರಾವಣ ಮಾಸದ ಅಷ್ಟಮಿಯ ಶುಭ ದಿನದಂದು ದೇವಕಿ ನಂದನನಿಗೆ ಎಲ್ಲೆಡೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತಿದೆ. ಅದೇ ರೀತಿ ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲೂ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯುತ್ತಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡರು.
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಕ್ತರು ಶ್ರೀ ಕೃಷ್ಣನ ಸ್ಮರಣೆ ಮಾಡುತ್ತಿದ್ದಾರೆ. ಇಸ್ಕಾನ್‌ನಲ್ಲಿ ಮುಂಜಾನೆ 4:3ರಿಂದ ರಾಧಾ-ಕೃಷ್ಣರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮುಂಜಾನೆ 4:30ಕ್ಕೆ ಕೃಷ್ಣನಿಗೆ ಮಂಗಳಾರತಿ ಮತ್ತು ತುಳಸಿ ಆರತಿ ಮಾಡಲಾಯಿತು. ಬಳಿಕ 7:30ಕ್ಕೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಜನ್ಮಾಷ್ಟಮಿ ಹಿನ್ನೆಲೆ ಇಂದು ಕೃಷ್ಣನಿಗೆ 4 ವಿಶೇಷ ಅಭಿಷೇಕ ನೆರವೇರಿಸಲಾಗುತ್ತದೆ. ಇಂದು ಬೆಳಗ್ಗೆ 7.30 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿದೆ.
ದೇವರ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ದುಷ್ಟರನ್ನು ಸಂಹಾರ ಮಾಡಿ ಶಿಷ್ಟರನ್ನು ರಕ್ಷಿಸುವುದು ಕೃಷ್ಣನ ಕೆಲಸ. ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಿಸೋ ಕೆಲಸ ಕೃಷ್ಣ ಮಾಡ್ತಾನೆ ಅನ್ನೋ ವಿಶ್ವಾಸವಿದೆ. ಭಾರತವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮಾಡಲಿ ಎಂದರು.