ಮಂಡ್ಯ : ಹೈಕೋರ್ಟ್ ಆದೇಶದಂತೆ ಕೆಆರ್‌ಎಸ್ ಅಣೆಕಟ್ಟೆ ೨೦ ಕಿ.ಮೀ. ವ್ಯಾಪ್ತಿ ಯಲ್ಲಿ ಟ್ರಯಲ್ ಬ್ಲಾಸ್ಟಿಂಗ್ ಮಾಡಲು ತಜ್ಞರ ಸಮಿತಿ ರಚಿಸಿದ್ದು, ಶೀಘ್ರದಲ್ಲಿಯೇ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ನಡೆಸುವ ಬಗ್ಗೆ ನಡೆದ ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಗಣಿಗಾರಿಕೆಗೆ ಸಂಬಂಧಿಸಿದಂತೆ ಕೆಆರ್‌ಎಸ್ ಅಣೆಕಟ್ಟೆಯ ೨೦ ಕಿ.ಮೀ .ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಹಾಗೂ ೬ ತಿಂಗಳ ಒಳಗೆ ಟ್ರಯಲ್ ಬ್ಲಾಸ್ಟಿಂಗ್ ನಡೆಸಿ ವರದಿ ನೀಡುವಂತೆಯೂ ಆದೇಶದಲ್ಲಿ ತಿಳಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಹೈಕೋರ್ಟ್ ಆದೇಶ ಹೊರಡಿಸಿದ ಪ್ರಕಾರ ೨೦ ಕಿಲೋಮೀಟರ್ ವ್ಯಾಪ್ತಿ ಯೊಳಗೆ ಯಾವುದೇ ಗಣಿಗಾರಿಕೆ ನಡೆಯದಂತೆ ನಿರ್ಬಂಧವನ್ನು ವಿಧಿಸಿ ನಿಗಾ ವಹಿಸಲಾಗುತ್ತಿದೆ, ಕಾವೇರಿ ನೀರಾವರಿ ನಿಗಮ ನಿಯಮಿತ ಇಲಾಖೆಯವರು ಟ್ರಯಲ್ ಬ್ಲಾಸ್ಟಿಂಗ್ ಮಾಡಲು ಈಗಾಗಲೇ ತಜ್ಞರ ಸಮಿತಿ ರಚನೆ ಮಾಡಿದ್ದು, ತಜ್ಞರ ಸಮಿತಿ ಭೇಟಿ ನೀಡಿ ಟ್ರಯಲ್ ಬ್ಲಾಸ್ಟಿಂಗ್‌ಗೆ ದಿನಾಂಕ ನಿಗದಿಪಡಿಸಬೇಕಿದೆ ಎಂದು ಹೇಳಿದರು.