ಮಂಡ್ಯ: KRS ಡ್ಯಾಂ ನಗುವನ ತೋಟದ ತಡೆಗೋಡೆ ಕುಸಿತ ವಿಚಾರ ಕುರಿತಂತೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದು, ದುರಂತಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
KRS ಡ್ಯಾಂ ನಗುವನ ತೋಟದ ತಡೆಗೋಡೆ ನೀರಿನ ರಬಸಕ್ಕೆ ಕುಸಿತವಾಗಿತ್ತು. ಈ ಹಿನ್ನಲೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಗ್ರಹಿಸಿರುವ ಸುಮಲತಾ ಅಂಬರೀಶ್, KRS ಡ್ಯಾಂ ತಡೆಗೋಡೆ ಕುಸಿತದ ಘಟನೆ ಆಘಾತಕಾರಿ. ಡ್ಯಾಂನಿಂದ ನೀರು ಬಿಡುಗಡೆ ಮಾಡುವಾಗ ತೋರಿದ ನಿರ್ಲಕ್ಷ್ಯ ಮತ್ತು ಅಜಾಗರೂಕತೆ ಈ ದುರಂತಕ್ಕೆ ಕಾರಣ. ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ತಡೆಗೋಡೆ ಕೇವಲ ಕೆಲವೇ ತಿಂಗಳಲ್ಲಿ ಕುಸಿದುಹೋಗಿದೆ. ಭ್ರಷ್ಟಾಚಾರ, ಅವ್ಯವಹಾರ ಮತ್ತು ಅಸಮರ್ಥತೆಯ ಸಂಕೇತವಾಗಿದೆ. ಈ ಘಟನೆ ಒಂದು ಎಚ್ಚರಿಕೆಯ ಪಾಠವಾಗಿದೆ ಎಂದಿದ್ದಾರೆ.

ಕೆಆರ್ ಎಸ್ ಡ್ಯಾಂ ಒಂದು ಪ್ರಮುಖ ಜಲಾಶಯವಾಗಿದ್ದು, ಅದರ ಸುರಕ್ಷತೆ ಕೇವಲ ಒಂದು ಲಘುವಾಗಿ ಪರಿಗಣಿಸಬಹುದಾದ ವಿಷಯವಲ್ಲ. ಈ ಘಟನೆಯಿಂದ ಉಂಟಾದ ಹಾನಿ ಭವಿಷ್ಯದಲ್ಲೂ ಅಪಾಯಕಾರಿ. ಘಟನೆಗೆ ಸಂಬಂಧಿಸಿದಂತೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತು ಈ ದುರಂತಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಭವಿಷ್ಯದಲ್ಲಿ ಇಂತಹ ದುರಂತಗಳು ಮತ್ತೆ ಸಂಭವಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.