ಗುಂಡ್ಲುಪೇಟೆ: ಪಟ್ಟಣದ 4ನೇ ವಾರ್ಡ್ ಕೆ.ಎಸ್.ನಾಗರತ್ನಮ್ಮ ಬಡಾವಣೆಯ ಚರಂಡಿಗಳಲ್ಲಿ ಹೂಳು ತುಂಬಿ ಗಬ್ಬೆದ್ದು ನಾರುತ್ತಿದೆ. ಇದರಿಂದ ನಿವಾಸಿಗರು ಮೂಗು ಮುಚ್ಚಿಕೊಂಡು ವಾಸ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಪಟ್ಟಣದ 4ನೇ ವಾರ್ಡ್ ಬಹುತೇಕ ಚರಂಡಿಗಳ ಎರಡು ಬದಿಯಲ್ಲೂ ಕಸದ ರಾಶಿ ತುಂಬಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ನಿವಾಸಿಗರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಕೆ.ಎಸ್.ನಾಗರತ್ನಮ್ಮ ಬಡಾವಣೆಯಲ್ಲಿ ಕೆಲ ರಸ್ತೆಗಳು ಗುಂಡಿಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸಬೇಕಾಗಿದೆ. ಇನ್ನೂ ಮಳೆ ಬಂದ ಸಂದರ್ಭದಲ್ಲಿ ನೀರು ನಿಂತು ಕೆರೆಯ ಮಾದರಿಯಂತೆ ನಿರ್ಮಾಣವಾಗುತ್ತಿದೆ. ಜೊತೆಗೆ ಕೆಸರು ರಸ್ತೆ ಮೇಲೆ ಓಡಾಡಬೇಕಾಗಿದೆ.
ಬೀದಿನಾಯಿಗಳ ಹಾವಳಿ: ಬಡಾವಣೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು, ಹಿಂಡು ಹಿಂಡಾಗಿ ರಸ್ತೆಯ ಮಧ್ಯೆದಲ್ಲಿಯೇ ಗುಂಪು ಕಟ್ಟಿಕೊಂಡು ನಿಲ್ಲುತ್ತಿದೆ. ಬಡಾವಣೆಗೆ ಹೊಂದಿಕೊಂಡಂತೆ ಜೆಎಸ್‍ಎಸ್ ಕಾಲೇಜು ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿದ್ದು, ನಾಯಿಗಳ ಹಾವಳಿಯಿಂದ ವಿದ್ಯಾರ್ಥಿಗಳು ಭಯದಲ್ಲಿ ಓಡಾಡಬೇಕಾಗಿದೆ. ಹೀಗಿದ್ದರೂ ಕೂಡ ಸಂಬಂಧ ಪಟ್ಟ ಪುರಸಭೆ ಸದಸ್ಯರು ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ.
4ನೇ ವಾರ್ಡ್ ಕೆ.ಎಸ್.ನಾಗರತ್ನಮ್ಮ ಬಡಾವಣೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆಸಲು ಶೀಘ್ರದಲ್ಲೆ ಕ್ರಮ ವಹಿಸಲಾಗುವುದು. - ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ. ಗುಂಡ್ಲುಪೇಟೆ.