ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದ 63ನೇ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಕರ್ತವ್ಯ ನಿರತದಲ್ಲಿ ಅಪಘಾತದಲ್ಲಿ ಮೃತಪಟ್ಟ 3 ಸಿಬ್ಬಂದಿ ಕುಟುಂಬಕ್ಕೆ ಒಂದು ಕೋಟಿ ರೂ. ಚೆಕ್ ಮತ್ತು ಕರ್ತವ್ಯ ನಿರತ ಹೊರತುಪಡಿಸಿ ಇತರೆ ಕಾರಣದಿಂದ ಮೃತಪಟ್ಟ 37 ಸಿಬ್ಬಂದಿಗೆ 10 ಲಕ್ಷ ರೂ ಚೆಕ್ ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿತರಣೆ ಮಾಡಿದ್ದಾರೆ.

ಸಾರಿಗೆ ಸುರಕ್ಷಾ ವಿಮಾ ಯೋಜನೆಯಡಿ ತಲಾ 1 ಕೋಟಿ ರೂ. ಚೆಕ್ ಮತ್ತು ಕುಟುಂಬ ಕಲ್ಯಾಣ ಯೋಜನೆ ಅಡಿ ತಲಾ 10 ಲಕ್ಷ ರೂ ಚೆಕ್ ವಿತರಣೆ ಮಾಡಲಾಗಿದೆ. ಈ ವೇಳೆ ಪುನಶ್ಚೇತನಗೊಳಿಸಿದ 3 ಐರಾವತ ಕ್ಲಬ್ ಕ್ಲಾಸ್ ಬಸ್ಗಳಿಗೂ ಚಾಲನೆ ನೀಡಲಾಗಿದೆ. ಬಸ್ಗಳ ಪುನಶ್ಚೇತನ ಕಾರ್ಯಕ್ಕೆ ವಿಭಾಗ ಹಾಗೂ ಪ್ರಾದೇಶಿಕ ಕಾರ್ಯಾಗಾರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಶೂನ್ಯ ಅಪಘಾತ ಸಾಧನೆಗೆ ಪಾವಗಡ ಘಟಕ ಹಾಗೂ ಘಟಕ ವ್ಯವಸ್ಥಾಪಕರಿಗೆ ನಗದು ಪುರಸ್ಕಾರ ನೀಡಲಾಗಿದೆ.
ಅನುಕಂಪದ ಆಧಾರದ ಮೇಲೆ ಮೃತ ಕುಟುಂಬದವರಿಗೆ ಕೆಎಸ್ಟಿ ಕಾನ್ಸಟೇಬಲ್ ಹುದ್ದೆಗೆ ನೇಮಕಾತಿ ಮಾಡುವುದು. ಇನ್ನು ನಿಗಮದ ಆಂತರಿಕ ನಿಯತಕಾಲಿಕೆ ಸಾರಿಗೆ ಸಂಪದ ಮತ್ತು ವಾಹನಗಳ ಪುನಶ್ಚೇತನ ಸಂಚಿಕೆ ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿಯ ಅಧ್ಯಕ್ಷರು ಸೇರಿ ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಭಾಗಿ ಆಗಿದ್ದರು.
ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗೆ ಐರಾವತ ಕ್ಲಬ್ ಕ್ಲಾಸ್ 2.0 ನೂತನ ವೋಲ್ವೋ (9600 ಮಾದರಿ)ಯ ಬಸ್ಗಳು ಸೇರ್ಪಡೆ ಆಗಿವೆ. ಇತ್ತೀಚೆಗೆ ಸಚಿವ ರಾಮಲಿಂಗಾರೆಡ್ಡಿ ಹೊಸಕೋಟೆ ಬಳಿಯಿರುವ ವೋಲ್ವೋ ಬಸ್ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದ್ದರು.
ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ 20 ಬಸ್ಸುಗಳನ್ನು ಕೆಎಸ್ಆರ್ಟಿಸಿಯು ಈ ತಿಂಗಳ ಕೊನೆಯ ವಾರದಲ್ಲಿ ವಾಹನಗಳ ಸಮೂಹಕ್ಕೆ ಸೇರ್ಪಡೆಗೊಳಿಸಲಿದೆ. ಕರ್ನಾಟಕವು ವಿವಿಧ ಮಾದರಿಯ ಅತ್ಯಾಧುನಿಕ ಬಸ್ಸುಗಳನ್ನು ಪ್ರಯಾಣಿಕರ ಬೇಡಿಕೆಗನುಣವಾಗಿ ಸೇರ್ಪಡೆ ಗೊಳಿಸುತ್ತಿರುವುದರಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ.