ತುಮಕೂರು: ಕೆಎಸ್ ಆರ್ ಟಿಸಿ ಚಾಲಕರೊಬ್ಬರು ಆಂಬ್ಯುಲೆನ್ಸ್ ರೀತಿಯಲ್ಲಿ ಬಸ್ ಚಲಾಯಿಸಿ, ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪುವ ಮೂಲಕ ಮೂರ್ಛೆ ಹೋದ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿರುವ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಈಶ್ವರ್ ರೆಡ್ಡಿ ಎಂಬಾತ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಬಸ್ ತಿಪಟೂರು ನಿಲ್ದಾಣ ತಲುಪಿದಾಗ ಉಸಿರಾಡಲು ಸಾಧ್ಯವಾಗದೆ ಈಶ್ವರ್ ರೆಡ್ಡಿ ಮೂರ್ಛೆ ತಪ್ಪಿ ಕೆಳಗೆಬಿದ್ದರು. ಬಿದ್ದ ರಭಸಕ್ಕೆ ಮೂಗಿಗೆ ಪೆಟ್ಟಾಗಿ ರಕ್ತಸ್ರಾವವಾಯಿತು. ಕೂಡಲೇ ಇದನ್ನು ಗಮನಿಸಿದ ನಿರ್ವಾಹಕ ಓಂಕಾರ್, ಚಾಲಕನಿಗೆ ತಿಳಿಸಿದರು.
ತಕ್ಷಣ ಎಚ್ಚೆತ್ತ ಚಾಲಕ ಪ್ರಕಾಶ್, ಬಸ್ ಅನ್ನು ತಿಪಟೂರು ತಾಲ್ಲೂಕು ಆಸ್ಪತ್ರೆಗೆ ಚಲಾಯಿಸಿದ್ದಾರೆ. ಪ್ರಯಾಣಿಕರ ಸಮೇತ ಆಂಬ್ಯುಲೆನ್ಸ್ ರೀತಿ ಬಸ್ ಚಲಾಯಿಸಿ, ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ ಪರಿಣಾಮ ಈಶ್ವರ್ ರೆಡ್ಡಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಚಾಲಕ ಮತ್ತು ನಿರ್ವಾಹಕನ ಕರ್ತವ್ಯ ಪ್ರಜ್ಞೆ ಮತ್ತು ಮಾನವೀಯತೆಯನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.