ಮಂಗಳೂರು (ದಕ್ಷಿಣ ಕನ್ನಡ): ದಲಿತೋದ್ಧಾರಕ, ಸಾಮಾಜಿಕ ಸುಧಾರಣೆಯ ಹರಿಕಾರ, ಕುದ್ಮುಲ್ ರಂಗರಾವ್ ರವರ ಪುಣ್ಯಸ್ಮರಣೆಯ ಅಂಗವಾಗಿ ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಹಾಗೂ ಎಸ್ಸಿ ಮೋರ್ಚಾ ವತಿಯಿಂದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಸ್ಮಾರಕಕ್ಕೆ ಭೇಟಿ ನೀಡಿದ ಬಿಜೆಪಿ ನಿಯೋಗ ಪುಷ್ಪ ನಮನಗಳನ್ನು ಸಲ್ಲಿಸಿತು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ರಂಗರಾಯರು ಶೋಷಿತರ ಅಭಿವೃದ್ಧಿಗಾಗಿ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟ ಮಹಾನ್ ಮಾನವತಾವಾದಿಗಳು. ಸಮಾಜದಲ್ಲಿ ಎಲ್ಲರಂತೆ ದಲಿತರೂ ಸಹ ಸ್ವಾಭಿಮಾನ, ಆತ್ಮ ಗೌರವದಿಂದ ಬದುಕಬೇಕು. ಅವರೂ ಸಹ ಉನ್ನತ ಶಿಕ್ಷಣ ಪಡೆದು ಸಮಾಜದ ಮುನ್ನಲೆಗೆ ಬರಬೇಕೆಂದು ತೀವ್ರ ಕಾಳಜಿ ವಹಿಸಿ ವಿರೋಧದ ನಡುವೆಯೂ ವಿಶೇಷ ಶಾಲೆಗಳನ್ನು ತೆರೆದರು. ಅಸ್ಪೃಶ್ಯತೆ ಹಾಗೂ ಶೋಷಣೆಯ ವಿರುದ್ಧ ಹೋರಾಡಿದ ಅವರ ಶ್ರೇಷ್ಠ ಬದುಕು ನಮ್ಮೆಲ್ಲರಿಗೂ ಸದಾ ಆದರ್ಶ ಎಂದರು.