ಬೆಂಗಳೂರು: 25 ಸಾವಿರಕ್ಕೂ ಹೆಚ್ಚು ಮಂದಿ ರೈತರು ಕುಸುಮ್ ಬಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ಯೋಜನೆಯಡಿ ರಾಜ್ಯ ಸರ್ಕಾರ 752 ಕೋಟಿ ರೂ. ವೆಚ್ಚ ಮಾಡಲಿದೆ. ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿದ ಬಳಿಕ ಸಬ್ಸಿಡಿ ಮೊತ್ತ ಕಡಿಮೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಸಿಎಂ ಅಧ್ಯಕ್ಷತೆಯಲ್ಲಿ ಕುಸುಮ್ ಬಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯ ಪ್ರಮುಖ ಹೈಲೈಟ್ಸ್ ಇಲ್ಲಿದೆ.
* ಕುಸುಮ್ ಬಿ ಯೋಜನೆಯಡಿ ಸೋಲಾರ್ ಕೃಷಿ ಪಂಪ್ಸೆಟ್ ಅಳವಡಿಸಲು, ಕೇಂದ್ರ ಸರ್ಕಾರ 30%, ರಾಜ್ಯ ಸರ್ಕಾರ 50% ರಷ್ಟು ಸಬ್ಸಿಡಿ ಒದಗಿಸುತ್ತಿದ್ದು, ಫಲಾನುಭವಿಗಳು 20% ರಷ್ಟು ಭರಿಸಬೇಕಿದೆ.
* ಈ ಯೋಜನೆಯಡಿ 40 ಸಾವಿರ ಪಂಪ್‌ಸೆಟ್‌ಗಳಿಗೆ ಅನುಮೋದನೆ ನೀಡಲಾಗಿದ್ದು, ಇದನ್ನು ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚಿಸಿದರು.
ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಜೆಡಿಎಸ್- ಬಿಜೆಪಿಯನ್ನು ಕಂಗೆಡಿಸಿದೆ: ಸಿಎಂ
* 25 ಸಾವಿರಕ್ಕೂ ಹೆಚ್ಚು ಮಂದಿ ರೈತರು ಕುಸುಮ್ ಬಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ಯೋಜನೆಯಡಿ ರಾಜ್ಯ ಸರ್ಕಾರ 752 ಕೋಟಿ ರೂ. ವೆಚ್ಚ ಮಾಡಲಿದೆ. ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿದ ಬಳಿಕ ಸಬ್ಸಿಡಿ ಮೊತ್ತ ಕಡಿಮೆಯಾಗಲಿದೆ.
* 4.5 ಲಕ್ಷ ಅನಧಿಕೃತ ಐಪಿ ಸೆಟ್‌ಗಳ ಪೈಕಿ 2ಲಕ್ಷ ಐಪಿ ಸೆಟ್ ಸಂಪರ್ಕ ಅಧಿಕೃತಗೊಳಿಸಲಾಗಿದೆ. ಈ ಅನಧಿಕೃತ ಐಪಿ ಸೆಟ್‌ಗಳನ್ನು ಕುಸುಮ್ ಬಿ ಯೋಜನೆಯಡಿ ಆದ್ಯತೆ ಮೇಲೆಗೆ ತರುವ ಬಗ್ಗೆ ಚರ್ಚೆ.
* ರೈತರಿಗೆ ಸ್ವಯಂ ವಿದ್ಯುತ್ ಮೂಲಸೌಕರ್ಯ ಕಲ್ಪಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಟ್ರಾನ್ಸ್ಫಾರ್ಮರ್ಗಳನ್ನು ಇಲಾಖೆ ಒದಗಿಸಲಿದೆ.
* ನೀರಾವರಿ ಪಂಪ್ ಸೆಟ್ ಗಳಿಗೆ 2024-25ರ ಸಾಲಿನಲ್ಲಿ 12785 ಕೋಟಿ ರೂಪಾಯಿಗಳ ಅನುದಾನ ಹಂಚಿಕೆ ಆಗಿದ್ದು, ಫೆಬ್ರವರಿ 2025 ವರೆಗೆ 11720 ಕೋಟಿ ರೂ. ಬಿಡುಗಡೆ ಆಗಿದೆ. 2025-26ರಲ್ಲಿ 16021 ಕೋಟಿ ರೂಪಾಯಿಗಳ ಆಯವ್ಯಯ ಹಂಚಿಕೆ ಆಗಿದೆ.
ಏನಿದು ಯೋಜನೆ..?: ಕುಸುಮ್-ಬಿ ಯೋಜನೆ ಎಂದರೆ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್. 2019 ರ ಮಾರ್ಚ್‌ನಲ್ಲಿ ಪಿಎಂ ಕುಸುಮ್ ಯೋಜನೆ ಪ್ರಾರಂಭವಾಗಿದೆ. ಈ ಯೋಜನೆಯಡಿಯಲ್ಲಿ, ರೈತರು ತಮ್ಮ ಕೃಷಿ ಪಂಪ್‌ಸೆಟ್‌ಗಳಿಗೆ ಸೌರಶಕ್ತಿ ಅಳವಡಿಸಲು ಶೇಕಡಾ 60ರಷ್ಟು ಸಹಾಯಧನ ಪಡೆಯುತ್ತಾರೆ. ರೈತರು ಒಟ್ಟು ವೆಚ್ಚದ 30% ರಷ್ಟನ್ನು ಸರ್ಕಾರದಿಂದ ಸಾಲವಾಗಿ ಪಡೆಯುತ್ತಾರೆ. ಇದು ಮೂರು ಘಟಕಗಳನ್ನು ಹೊಂದಿದೆ. ವಿಕೇಂದ್ರೀಕೃತ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವುದು, ಸ್ವತಂತ್ರ ಸೌರ ಪಂಪ್‌ಗಳನ್ನು ಸ್ಥಾಪಿಸುವುದು ಮತ್ತು ಅಸ್ತಿತ್ವದಲ್ಲಿರುವ ಗ್ರಿಡ್-ಸಂಪರ್ಕಿತ ಪಂಪ್‌ಗಳನ್ನು ಸೌರಶಕ್ತಿಗೊಳಿಸುವುದು. ಭಾರತ ಸರ್ಕಾರದ ಪಿಎಂ-ಕುಸುಮ್ ಯೋಜನೆಯು 35 ಲಕ್ಷಕ್ಕೂ ಹೆಚ್ಚು ರೈತರಿಗೆ ಶುದ್ಧ ಶಕ್ತಿಯನ್ನು ಒದಗಿಸುವ ವಿಶ್ವದ ಅತಿದೊಡ್ಡ ಉಪಕ್ರಮಗಳಲ್ಲಿ ಒಂದಾಗಿದೆ.
ಉದ್ದೇಶಗಳೇನು?: ರೈತರಿಗೆ ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ನೀರಾವರಿಯಲ್ಲಿ ಸೌರ ಪಂಪ್‌ಗಳು ಸಹಾಯ ಮಾಡುತ್ತವೆ. ಯಾಕೆಂದರೆ ಇವು ಸುರಕ್ಷಿತ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಇದರ ಜೊತೆಗೆ, ಪಂಪ್ ಸೆಟ್‌ಗಳು ಡೀಸೆಲ್ ಚಾಲಿತ ಪಂಪ್‌ಗಳಿಗಿಂತ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುವ ಇಂಧನ ವಿದ್ಯುತ್ ಗ್ರಿಡ್ ಅನ್ನು ಒಳಗೊಂಡಿರುತ್ತವೆ.