ಯಳಂದೂರು: ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಎಲ್ ನವೀನ ಅವಿರೋಧವಾಗಿ ಆಯ್ಕೆಯಾದರು.
೧೬ ಸದಸ್ಯರಿರುವ ಈ ಪಂಚಾಯಿತಿಯಲ್ಲಿ, ಅಧ್ಯಕ್ಷರಾಗಿದ್ದ ಸಿ. ನಂಜುಂಡಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಈ ಸ್ಥಾನವು ಖಾಲಿಯಾಗಿತ್ತು. ಇದಕ್ಕೆ ಬುಧವಾರ ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಲ್. ನವೀನ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾಧಿಕಾರಿಯಾಗಿದ್ದ ನೀರಾವರಿ ಇಲಾಖೆಯ ಎಇಇ ಚಂದ್ರಶೇಖರ್ ಎಲ್. ನವೀನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಇವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಎಲ್. ನವೀನ ಮಾತನಾಡಿ, ತಾಲೂಕಿನ ಪ್ರತಿಷ್ಠಿತ ಪಂಚಾಯಿತಿಗಳಲ್ಲಿ ಅಂಬಳೆ ಪಂಚಾಯಿತಿಯೂ ಒಂದಾಗಿದೆ. ಇದಕ್ಕೆ ತನ್ನದೇ ಆದ ಐತಿಹ್ಯವಿದೆ. ಈ ಪಂಚಾಯತಿ ವ್ಯಾಪ್ತಿಗೆ ವೈ.ಕೆ. ಮೋಳೆ, ಅಂಬಳೆ, ಚಂಗಚಹಳ್ಳಿ, ಹೆಗ್ಗಡೆಹುಂಡಿ ಗ್ರಾಮಗಳು ಸೇರುತ್ತವೆ. ಈ ಗ್ರಾಮ ವ್ಯಾಪ್ತಿಯ ಮೂಲ ಸಮಸ್ಯೆಗಳ ನಿವಾರಣೆ, ರಸ್ತೆ, ಚರಂಡಿಗಳ ಅಭಿವೃದ್ಧಿ, ಕುಡಿಯುವ ನೀರಿಗೆ ಆದ್ಯತೆ, ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಇಡೀ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ನಾನು ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ನನ್ನ ಅವಿರೋಧ ಆಯ್ಕೆಗೆ ಕಾರಣರಾದ ಎಲ್ಲಾ ಸಹ ಸದಸ್ಯರು, ಪಂಚಾಯಿತಿ ಪಿಡಿಒ, ನೌಕರರ ಬೆಂಬಲದೊಂದಿಗೆ ಯಾವುದೇ ಗೊಂದಲವಿಲ್ಲದೆ ಕೆಲಸವನ್ನು ನಿರ್ವಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ಸಿ. ಸಿದ್ದನಾಯಕ,ಮಹೇಶ್ವರಿ, ಆರ್. ಗೀತಾ, ಎಸ್. ಮಹದೇವಸ್ವಾಮಿ, ಸಿ. ನಂಜುಂಡಸ್ವಾಮಿ, ಆರ್. ರಾಜಣ್ಣ, ಆರ್. ಅರುಣಕುಮಾರಿ, ನಾಗಮ್ಮ ದೊಡ್ಡಪುಟ್ಟ, ಸುಜಾತಸ್ವಾಮಿ, ಎಂ. ಸ್ವಾಮಿ, ಮಾಲಸಿದ್ದರಾಜು, ಡಿ. ರೇವಣ್ಣ, ಆರ್. ರಾಣಿ, ಎಂ. ನಂಜರಾಜು ಪಿಡಿಒ ಸಿ.ಎನ್. ಕಾವ್ಯ, ಕಾರ್ಯದರ್ಶಿ ಪುಟ್ಟರಾಜು ಮುಖಂಡರಾದ ವೆಂಕಟೇಶ್, ವೈ.ಸಿ. ಮಹದೇವಸ್ವಾಮಿ, ಹಾಲಿನ ಮಹದೇವಸ್ವಾಮಿ, ಕೆಂಪರಾಜು, ಕುಮಾರ, ಸನತ್ ಸೇರಿದಂತೆ ಅನೇಕರು ಇದ್ದರು.