ಚಿಕ್ಕಮಗಳೂರು: ಒಂಟಿ ಸಲಗ ದಾಳಿಗೆ ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹೆಡದಾಳು ಗ್ರಾಮದಲ್ಲಿ ನಡೆದಿದೆ.
ಮೀನಾ (45) ಮೃತ ಕಾರ್ಮಿಕ ಮಹಿಳೆ.
ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಬುಧವಾರ ಬೆಳಿಗ್ಗೆ ಮೀನಾ ತೋಟಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ. ಕಾಡಾನೆ ತುಳಿತದಿಂದ ಮೀನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ದೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳೆದ ಒಂದು ತಿಂಗಳಿನಿಂದ ಅಲ್ದೂರು ಅರೇನೂರು, ಹೆಡದಾಳು ಗ್ರಾಮಗಳಲ್ಲಿ ಸಂಚಾರ ಮಾಡುತ್ತಿದ್ದ ಏಳು ಕಾಡಾನೆಗಳ ಹಿಂಡಿನಿಂದ ಒಂಟಿ ಸಲಗ ಬೇರ್ಪಟ್ಟಿದೆ. ಈ ಕಾಡಾನೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒಂದು ತಿಂಗಳಿನಿಂದ ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದಾರೆ. ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ.
ಗ್ರಾಮಸ್ಥರ ಪ್ರತಿಭಟನೆ
ಘಟನೆ ನಡೆದ ಸ್ಥಳದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಮೃತ ದೇಹ ತೆಗೆಯದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಹಿಂಡು ಲಕ್ಷಾಂತರ ಮೌಲ್ಯದ ಕಾಫಿ ಅಡಿಕೆ, ತೆಂಗು ಬಾಳೆ ನಾಶ ಮಾಡಿದೆ. ಈ ಹಿಂಡಿನಿಂದ ಬೇರ್ಪಟ್ಟ ಒಂಟಿ ಸಲಗ ಒಂದು ತಿಂಗಳ ಹಿಂದೆ ಅರೇನೂರು ಗ್ರಾಮದ ಕಾರ್ಮಿಕನ ಮೇಲೆ ದಾಳಿ ಮಾಡಿತ್ತು. ಕಾಡಾನೆ ಸಂಚಾರ ಮಾಡುತ್ತಿರುವ ಕುರಿತು ಮತ್ತು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಆದರೂ ಕೂಡ ಕ್ರಮಕೈಗೊಳ್ಳದ ಅಲ್ದೂರು ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.