ನಂಜನಗೂಡು: ತಲೆಗೆ ಮಿಷಿನ್ ಬಡಿದು ಕಾರ್ಮಿಕ ಸಾವನ್ನಪ್ಪಿದ ಘಟನೆ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಕೃಷಿ ಜಿಯೋ ಪ್ಯಾಕ್ ಪ್ರೈ.ಲಿ.ನಲ್ಲಿ ನಡೆದಿದೆ. ಆಶೀಸ್ ಸುಖದಾಸ್ ಪಾಟ್ಲೆ (೨೪)ಮೃತ ಕಾರ್ಮಿಕ. ಮಹಾರಾಷ್ಟ್ರ ಮೂಲದ ಕಾರ್ಮಿಕನಾಗಿದ್ದು,ಕಳೆದ ನಾಲ್ಕು ವರ್ಷಗಳಿಂದ ಮೆಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನೆನ್ನೆ ಮೆಷಿನ್‌ಗೆ ದಾರವನ್ನು ಹಾಕುತ್ತಿದ್ದ ವೇಳೆ ಕಾರ್ಮಿಕನ ತಲೆ ಮೆಷಿನ್‌ಗೆ ತಾಕಿದೆ. ಪರಿಣಾಮ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಕಾರ್ಮಿಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.