ಚನ್ನಪಟ್ಟಣ: ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹಿರಿಯ ರಂಗಕಲಾವಿದರು ಹಾಗೂ ಜೈನ್ ಸಮುದಾಯದ ಹಿರಿಯ ಮುಖಂಡರು ಹಾಗೂ ಸಮಾಜ ಸೇವಕರಾದ ಸುಮತಿಕುಮಾರ್ ಜೈನ್ ಅವರು ಆರೋಪ ಮಾಡಿದರು.
ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ೧೦೦ ದಿನಗಳ ಪ್ರತಿಜ್ಞೆಯ ಹೋರಾಟ ನಡೆಸುತ್ತಿದ್ದು ಶನಿವಾರ ನಡೆದ ಹತ್ತನೇ ದಿನದ ಹೋರಾಟಕ್ಕೆ ಪಟ್ಟಣದ ರಾಜಸ್ತಾನ್ ಸಂಘ ಮತ್ತು ಜೈನ್ ಸಮುದಾಯದಿಂದ ಬೆಂಬಲ ಸೂಚಿಸಿ ಮಾತನಾಡಿದ ಅವರು, ನಮ್ಮ ರಾಜಕಾರಣಿಗಳು ರೈತರ ಹಿತ ಕಾಯುವ ಬದಲು ರಾಜ್ಯದ ಜನರನ್ನು ಗೊಂಬೆ ಆಡಿಸಿದಂತೆ ಆಡಿಸುತ್ತಿದ್ದಾರೆ. ನಮ್ಮಲ್ಲಿ ರಾಜಕೀಯ ಅಧಿಕಾರದ ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ತಮಿಳುನಾಡಿನ ರಾಜಕಾರಣಿಗಳು ರಾಜಕಾರಣವನ್ನು ಚುನಾವಣೆಗಳಿಗೆ ಸೀಮಿತ ಮಾಡಿಕೊಂಡು ನೆಲ, ಜಲ ಭಾಷೆಯ ವಿಚಾರದಲ್ಲಿ ಒಟ್ಟಾಗಿ ನಿಲ್ಲುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯಕ್ಕೆ ನೀರು ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೆ ಸೂಕ್ತ ಪರಿಹಾರವಾಗಿದ್ದು, ಈ ಯೋಜನೆಯಿಂದ ಹೆಚ್ಚು ಮಳೆಬಂದಾಗ ಸಮುದ್ರಕ್ಕೆ ಹರಿಯುವ ನೀರನ್ನು ಸಂಗ್ರಹಿಸಿ ಮಳೆ ಇಲ್ಲದ ಸಂಕಷ್ಟದ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಈ ನೀರಿನ ಸೌಲಭ್ಯ ಸಿಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿ ಇರಲಿ ಮೇಕೆದಾಟು ಯೋಜನೆ ಮಾಡುವ ನಿರ್ಣಯ ಮಾಡಬೇಕು. ಅಲ್ಲಿಯ ವರೆಗೆ ನಾವು ಸತತವಾಗಿ ಹೋರಾಟ ಮಾಡೋಣ ಎಂದು ಹೇಳಿದರು.
ಸಮುದಾಯದ ಮುಖಂಡರಾದ ಬಾಬುಲಾಲ್ ಕೊಠಾರಿ ಅವರು ಮಾತನಾಡಿ, ಹಿಂದಿನ–ಇಂದಿನ ಕೇಂದ್ರ ಸರ್ಕಾರಗಳು ರಾಜ್ಯಕ್ಕೆ ಎಲ್ಲಾ ವಿಚಾರದಲ್ಲೂ ಮಲತಾಯಿ ಧೋರಣೆ ಮಾಡುತ್ತಾ ಬಂದಿದೆ. ಮೇಕೆದಾಟು ಯೋಜನೆಯನ್ನು ನಮ್ಮ ಜಾಗದಲ್ಲೇ ಕಟ್ಟುತ್ತಿದ್ದೇವೆ. ಇದಕ್ಕೆ ತಮಿಳುನಾಡು ಅಡ್ಡಿ ಮಾಡುವುದನ್ನು ಮುಂದಿಟ್ಟು ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡದೆ ಇರುವುದು ಖಂಡನೀಯವಾಗಿದೆ ಎಂದರು. ಕೆ.ಕೆ. ಎಲೆಕ್ಟ್ರಿಕಲ್ಸ್‌ನ ಕಿಸ್ತೂರ್ ಚಂದ್ ಮಾತನಾಡಿ ನಮಗೆ ಕುಡಿಯಲು ನೀರಿಲ್ಲದ ವೇಳೆ ತಮಿಳುನಾಡಿಗೆ ನೀರು ಬಿಡುವುದು ಹೇಗೆ ಸಾಧ್ಯ. ಮೋದಿ ಅವರು ಬೇರೆ ದೇಶಗಳ ನಡುವಿನ ಸಮಸ್ಯೆ ಬಗೆಹರಿಸಲು ಗಮನ ನೀಡುವಂತೆ ನಮ್ಮ ರಾಜ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಲಿ ಎಂದರು.
ರಾಜುಗುಲೇಚ ಅವರು ಮಾತನಾಡಿ, ನಾಡು ನುಡಿ ಜಲ ಭಾಷೆಯ ಹೋರಾಟದಲ್ಲಿ ಕಕಜ ವೇದಿಕೆ ಮುಂದಾಗಿದ್ದು ಅವರ ಹೋರಾಟಕ್ಕೆ ನಮ್ಮ ಸಂಘದ ಬೆಂಬಲ ಸದಾ ಇರುತ್ತದೆ. ಎಂದರು. ಕಾವೇರಿ ವಿಚಾರದಲ್ಲಿ ಯಾರಿಗೂ ಅನ್ಯಾಯ ಆಗದಂತೆ ಮಳೆ ಆದಾರಿತ ಸಂಕಷ್ಟ ಸೂತ್ರ ರಚಿಸಬೇಕು, ಮೇಕೆದಾಟು ಯೋಜನೆಯಿಂದ ನಮಗಷ್ಟೇ ಅಲ್ಲ. ನಮಗೆ ನೀರಿನ ಲಭ್ಯತೆ ಇದ್ದಾಗ ತಮಿಳುನಾಡಿಗೂ ನೀರು ಹರಿಸಬಹುದಾಗಿದ್ದು ಈ ಯೋಜನೆಗೆ ಅಡ್ಡಿ ಮಾಡುತ್ತಿರುವ ತಮಿಳುನಾಢು ಸರ್ಕಾರ ಯೋಜನೆಗೆ ಸಹಕಾರ ನೀಡಬೇಕು ಎಂದು ಅಭಿಪ್ರಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ರಾಜ್ಯ ಉಪಾಧ್ಯಕ್ಷರುಗಳಾದ ಬೆಂಕಿ ಶ್ರೀಧರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದಾಪುರ ಕೃಷ್ಣೇಗೌಡ, ಚಿಕ್ಕೇನಹಳ್ಳಿ ಸುಧಾಕರ್, ಸಿದ್ದಪ್ಪಾಜಿ, ಕಮಲ್ ಸಿಂಗ್, ಸಂತೋಷ್ ಜಾದವ್, ವಿಕಾಸ್ ಜಾದವ್, ಲಕ್ಷ್ಮಣ್ ಜೀ, ಅಜಯ್ ಬ್ಯಾಂಕರ್, ಬಾಬು, ಶಾಂತಿ ಲಾಲ್ ಬೋಲೆರಾಮ್, ಸುಮಿತ್ ಕುಮಾರ್, ಜಯ್ ಚಂದ್ , ಅನಿಲ್ ಕುಮಾರ್, ಪದಮ್ ಭುವೋತ್, ಅಜಿತ್ ಕುಮಾತ್ ಭುವೋತ್, ಬುಧ ರಾಣಿ ಜೀ, ಕಿಸ್ತೂರ್ ಚಂದ್ ಧಾಕ, ಮಹೇಂದ್ರೆ ಕುಮಾರ್, ಧನ್‌ರಾಜ್, ಜಿತು ಚಟರ್ಜಿ, ಓಂ ಪ್ರಕಾಶ್ ಅಗರ್ವಾಲ್, ಘೇವರ್ ರಾಮ್, ಹೀರಾ ಸಿಂಗ್, ರಾಜು ಗುಲೇಚ, ರಾಜು ಜಲೇದ, ಕಿಶನ್ ಸಿಂಗ್, ಓಂ ಪ್ರಕಾಶ್, ಪಿ. ದುಮಿತ್ ಕುಮಾರ್, ಚುತ್ರ ರಾಮ್ ಚೌದಿ, ಉಮಾರಾಮ್ ಬರ್‍ತಾ, ಮನಿ ಕುಮಾರ್, ದಿನೇಶ್ ಕುಮಾರ್ ತಲೇರ, ನರೇಶ್, ಸುಧಾಕರ್ ಸೇರಿದಂತೆ ಹಲವರು ಮಂದಿ ಭಾಗವಹಿಸಿದ್ದರು.