ಮಂಗಳೂರು(ದಕ್ಷಿಣ ಕನ್ನಡ): ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ 2020ರಲ್ಲಿ ರದ್ದಾಗಿದ್ದ ಲಕ್ಷದ್ವೀಪ-ಮಂಗಳೂರು ಪ್ರಯಾಣಿಕರ ಹಡಗು ನಾಲ್ಕು ವರ್ಷದ ಬಳಿಕ ಮಂಗಳೂರಿನ ಹಳೆಯ ಬಂದರಿಗೆ ಗುರುವಾರ ಸಂಜೆ ಆಗಮಿಸಿತ್ತು.
ಇದೀಗ ಈ ಹಡಗು ಇಂದು ಮುಂಜಾನೆ ಮರಳಿ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಿತು.
ಗುರುವಾರ ಬೆಳಗ್ಗೆ 7 ಗಂಟೆಗೆ ಲಕ್ಷದ್ವೀಪದ ಕದ್ಮತ್ ದ್ವೀಪದಿಂದ ಪ್ರಯಾಣ ಆರಂಭಿಸಿದ್ದ ಕೊಚ್ಚಿಯ ‘ಪರೊಲಿ’ ಎಂಬ ಹೆಸರಿನ ಹಡಗು ಅಲ್ಲಿನ ಮತ್ತೊಂದು ದ್ವೀಪಕ್ಕೆ ತಲುಪಿತ್ತು. ಬಳಿಕ ಅಲ್ಲಿಂದ 8:15ಕ್ಕೆ ಪ್ರಯಾಣ ಆರಂಭಿಸಿದ ಹಡಗು ಸಂಜೆ 4ಕ್ಕೆ ಮಂಗಳೂರು ಬಂದರು ಹೊರವಲಯಕ್ಕೆ ತಲುಪಿ ಲಂಗರು ಹಾಕಿತ್ತು.
ಹಿಂದೆ ಮಂಗಳೂರು-ಲಕ್ಷದ್ವೀಪ ನಡುವೆ ಸಂಚರಿಸುತ್ತಿದ್ದ ದೊಡ್ಡ ಹಡಗಿನ ಪ್ರಯಾಣದ ಅವಧಿ 13 ಗಂಟೆಯಾಗಿತ್ತು. ಆದರೆ ಈ ಹೊಸ ಹಡಗಿನ ಪ್ರಯಾಣದ ಅವಧಿ ಕೇವಲ 7 ಗಂಟೆಯಾಗಿರುತ್ತದೆ. 7 ವರ್ಷದ ಹಿಂದೆ ಹೈಸ್ಪೀಡ್ ಹಡಗು ಲಕ್ಷದ್ವೀಪ ಮತ್ತು ಮಂಗಳೂರು ಸಂಚರಿಸುತ್ತಿತ್ತು. ಇದೀಗ ಮತ್ತೊಮ್ಮೆ ಹೈಸ್ಪೀಡ್ ಹಡಗು ಲಕ್ಷದ್ವೀಪ ಮತ್ತು ಮಂಗಳೂರು ನಡುವೆ ಪ್ರಯಾಣ ಆರಂಭಿಸಿದೆ.
ಲಕ್ಷದ್ವೀಪವು ಕೇಂದ್ರಾಡಳಿತ ಪ್ರದೇಶವಾಗಿದೆ. ಹಾಗಾಗಿ ಮಂಗಳೂರಿನಿಂದ ಅಲ್ಲಿಗೆ ತೆರಳುವವರಿಗೆ ಪ್ರಯಾಣ ಅಷ್ಟು ಸುಲಭವಿಲ್ಲ. ಸಂಬಂಧಪಟ್ಟ ಇಲಾಖೆಗಳ ಅನುಮತಿಯ ಅಗತ್ಯವಿದೆ. ಲಕ್ಷದ್ವೀಪದ ನಿವಾಸಿಗಳ ಪರಿಚಯವಿದ್ದು, ಅವರಿಂದ ಅಲ್ಲಿಗೆ ತೆರಳಲು ಆಹ್ವಾನ ಬೇಕು. ಬಳಿಕ ಅರ್ಜಿ ಸಲ್ಲಿಸಿ, ಪೊಲೀಸ್ ಇಲಾಖೆಯಿಂದ ಪರಿಶೀಲನೆ ನಡೆದು ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಟ್ರಾವೆಲ್ ಏಜೆನ್ಸಿಗಳ ಮೂಲಕವೂ ತೆರಳಬಹುದು. ಆದರೆ ಇದು ತುಸು ದುಬಾರಿ ಪ್ರಯಾಣ ವಾಗಿದೆ. ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಹೊರಗಿನ ಜನರು ಲಕ್ಷದ್ವೀಪಕ್ಕೆ ಭೇಟಿ ನೀಡುವ ಪ್ರಕ್ರಿಯೆಯು ಸರಳೀಕರಣಗೊಳ್ಳಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.