ನವದೆಹಲಿ: 2023ರ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಝೋರಾಮ್ ಪೀಪಲ್ಸ್ ಮೂವ್ ಮೆಂಟ್ ನ ನಾಯಕ ಲಾಲ್ಡುಹೋಮ ಅವರು ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ ಅನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದು, ಇಂದು ಲಾಲ್ಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
40 ಸದಸ್ಯ ಬಲದ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಝೋರಾಂ ಪೀಪಲ್ಸ್ ಮೂವ್ ಮೆಂಟ್ಸ್ ಪಕ್ಷ ಬರೋಬ್ಬರಿ 27 ಸ್ಥಾನಗಳಲ್ಲಿ ಜಯಗಳಿಸಿತ್ತು. 1987ರಲ್ಲಿ ಮಿಜೋರಾಂ ರಾಜ್ಯ ರಚನೆಯಾಗಿದ್ದು, ಮತದಾರರು ಕಾಂಗ್ರೆಸ್ ಅಥವಾ ಎಂಎನ್ ಎಫ್ ಗೆ ಅಧಿಕಾರ ನೀಡುತ್ತಿದ್ದು, ಇದೇ ಮೊದಲ ಬಾರಿ ಎರಡೂ ಪಕ್ಷಗಳನ್ನು ತಿರಸ್ಕರಿಸಿ ಝಡ್ ಪಿಎಂಗೆ ಗದ್ದುಗೆ ಏರಲು ಅವಕಾಶ ನೀಡಿದ್ದಾರೆ.
ಡಿಸೆಂಬರ್ 6ರಂದು ಲಾಲ್ಡುಹೋಮ ಅವರು ರಾಜ್ಯಪಾಲ ಹರಿ ಬಾಬು ಕಂಬಂಪತಿ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಇಂದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಲಾಲ್ಡುಹೋಮ ಅವರು ಮಿಜೋರಾಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.