Friday, April 11, 2025
Google search engine

Homeಅಪರಾಧಭೂ ಹಗರಣ ಆರೋಪ: ಟಾಲಿವುಡ್ ನಿರ್ಮಾಪಕನ ಬಂಧನ

ಭೂ ಹಗರಣ ಆರೋಪ: ಟಾಲಿವುಡ್ ನಿರ್ಮಾಪಕನ ಬಂಧನ

ಭಾರಿ ಮೊತ್ತದ ಭೂ ಹಗರಣ ಮಾಡಿರುವ ಆರೋಪದಲ್ಲಿ ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕ ಒಬ್ಬರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾಗಳಾದ ಮಹೇಶ್ ಬಾಬು ನಟನೆಯ ‘ಯುವರಾಜ’, ಪವನ್ ಕಲ್ಯಾಣ್ ನಟನೆಯ ‘ತಮ್ಮುಡು’, ವೆಂಕಟೇಶ್ ನಟನೆಯ ‘ಪ್ರೇಮಂಟೆ ಇದೇರಾ’ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಬುರುಗಪಲ್ಲಿ ಶಿವ ರಾಮ ಕೃಷ್ಣ ಅನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಎರಡು ದಶಕಗಳ ಕಾಲ ನಡೆದ ಪ್ರಕರಣದಲ್ಲಿ ಶಿವ ರಾಮ ಕೃಷ್ಣ ಅವರಿಗೆ ತೀವ್ರ ಹಿನ್ನಡೆ ಆಗಿದೆ.

1900 ಹಾಗೂ 2000 ದಶಕದಲ್ಲಿ ಟಾಪ್ ನಿರ್ಮಾಪಕ ಆಗಿದ್ದ ಬುರುಗಪಲ್ಲಿ ಶಿವ ರಾಮ ಕೃಷ್ಣ, ಸರ್ಕಾರ ಹಾಗೂ ಇತರೆ ಕೆಲವರಿಗೆ ಸೇರಿದ ಸುಮಾರು 80 ಎಕರೆ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ತನ್ನದು ಮಾಡಿಕೊಂಡಿದ್ದರು. ಹೈದರಾಬಾದ್​ ಬಳಿಯಲ್ಲಿಯೇ ಈ 80 ಎಕರೆ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಜಮೀನಿನ ಈಗಿನ ಮೌಲ್ಯ ಸುಮಾರು 500 ಕೋಟಿಗೂ ಹೆಚ್ಚು ಎನ್ನಲಾಗುತ್ತದೆ. 2003 ರಲ್ಲಿಯೇ ಈ ಹಗರಣ ಬೆಳಕಿಗೆ ಬಂದು, ಆಗಿನ ಅವಿಭಜಿತ ಆಂಧ್ರ ಪ್ರದೇಶ ಸರ್ಕಾರ ಬುರುಗಪಲ್ಲಿ ಶಿವ ರಾಮ ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿತ್ತು.

ಪುರಾತತ್ವ ಇಲಾಖೆಯ ಹಿರಿಯ ಸಹಾಯಕ ಕೊತ್ತಿ ಚಂದ್ರಶೇಖರ್ ಎಂಬುವರ ನೆರವು ಪಡೆದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಬುರುಗಪಲ್ಲಿ ಶಿವ ರಾಮ ಕೃಷ್ಣ ಆ ನಂತರ ಬಿಲ್ಡರ್ ಮುರುಗ ಲಿಂಗಂ ಸಹಾಯ ಪಡೆದು ಅಲ್ಲಿ ನಿವೇಶನ ನಿರ್ಮಾಣ ಹಾಗೂ ಮಾರಾಟಕ್ಕೆ ಮುಂದಾಗಿದ್ದರು. ಬಿಲ್ಡರ್ ಮುರುಗ ಲಿಂಗಂ ಸಹ, ನಕಲಿ ದಾಖಲೆ ಸೃಷ್ಟಿಸಲು ಶಿವ ರಾಮ ಕೃಷ್ಣಗೆ ಸಹಾಯ ಮಾಡಿದ್ದರು. ಈಗ ಈ ಇಬ್ಬರನ್ನೂ ಸಹ ಬಂಧಿಸಲಾಗಿದೆ.

2003 ರಲ್ಲಿ ಅವಿಭಜಿತ ಆಂಧ್ರ ಪ್ರದೇಶ ಸರ್ಕಾರವು ಶಿವ ರಾಮ ಕೃಷ್ಣ ಅವರ ಮಾಲೀಕತ್ವವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಹೂಡಿತ್ತು, ಹೈಕೋರ್ಟ್​ನಲ್ಲಿ ಶಿವ ರಾಮ ಕೃಷ್ಣಗೆ ಹಿನ್ನಡೆ ಆಗಿತ್ತು, ಬಳಿಕ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್​ನಲ್ಲಿ ನಡೆದು ಶಿವ ರಾಮ ಕೃಷ್ಣಗೆ ಸುಪ್ರೀಂಕೋರ್ಟ್​ನಲ್ಲಿಯೂ ಹಿನ್ನಡೆ ಆಗಿರುವುದಲ್ಲದೆ, ಶಿವ ರಾಮ ಕೃಷ್ಣ ಮತ್ತು ಸಂಗಡಿಗರು ಭಾರಿ ಮೌಲ್ಯದ ಜಮೀನನ್ನು ನಕಲಿ ದಾಖಲೆ ಬಳಸಿ ಅಕ್ರಮವಾಗಿ ವಶಕ್ಕೆ ಪಡೆದಿರುವುದು ಸಾಬೀತಾಗಿದೆ. ಪ್ರಕರಣದಲ್ಲಿ ಶಿವ ರಾಮ ಕೃಷ್ಣಗೆ ಶಿಕ್ಷೆ ವಿಧಿಸಲಾಗಿದ್ದು, ಇದೇ ಕಾರಣಕ್ಕೆ ಹೈದರಾಬಾದ್​ನ ಒಸ್ವಾಲ್ ಯೂನಿವರ್ಸಿಟಿ ಪೊಲೀಸರು ಶಿವ ರಾಮ ಕೃಷ್ಣ ಹಾಗೂ ಇತರರನ್ನು ಬಂಧಿಸಿದ್ದಾರೆ.

ತೆಲುಗು ಚಿತ್ರರಂಗದ ಹಲವಾರು ಮಂದಿ ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡಿದ್ದು, ನಿರ್ಮಾಪಕ ಆಗಿರುವ ಜೊತೆಗೆ ಬಿಲ್ಡರ್ ಸಹ ಆಗಿದ್ದ ಶಿವ ರಾಮ ಕೃಷ್ಣ ಸಹ ಟಾಲಿವುಡ್​ನ ಹಲವು ಸೆಲೆಬ್ರಿಟಿಗಳಿಗೆ ಜಮೀನು ಕೊಡಿಸಿದ್ದಾರೆ. ಹಾಗಾಗಿ ಈಗ ಶಿವ ರಾಮ ಕೃಷ್ಣ ಅವರ ಇತರೆ ಜಮೀನುಗಳ ಮಾಲೀಕತ್ವದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಜೊತೆಗೆ ಹೈದರಾಬಾದ್​ ಹಾಗೂ ಅದರ ಹೊರವಲಯದಲ್ಲಿರುವ ಎಲ್ಲ ಜಮೀನುಗಳ ಮಾಲೀತ್ವದ ತನಿಖೆಗೆ ಸಹ ಒತ್ತಾಯಿಸಲಾಗುತ್ತಿದೆ. ತೆಲಂಗಾಣ ಸರ್ಕಾರ ಈಗಾಗಲೇ ‘ಹೈಡ್ರಾ’ ಮೂಲಕ ಹೈದರಾಬಾದ್​ನಲ್ಲಿ ಎಲ್ಲೆಲ್ಲಿ ಅಕ್ರಮ ಒತ್ತುವರಿ ಆಗಿದೆಯೋ ಅವನ್ನೆಲ್ಲ ತೆರವು ಮಾಡುತ್ತಿದೆ. ಇದೇ ಸಮಯದಲ್ಲಿ ಈ ಪ್ರಕರಣ ಹೈಡ್ರಾಗೆ ಇನ್ನಷ್ಟು ಬಲ ತುಂಬಿದಂತಾಗಿದೆ.

RELATED ARTICLES
- Advertisment -
Google search engine

Most Popular