ಮೈಸೂರು: ನಗರದ ಪಾರಂಪರಿಕ ಕಟ್ಟಡಗಳಲ್ಲಿ ಪ್ರಮುಖವಾದ ಲ್ಯಾನ್ಸ್‌ಡೌನ್ ಬಿಲ್ಡಿಂಗ್, ದೇವರಾಜ ಮಾರ್ಕೆಟ್, ಮಹಾರಾಣಿ ಕಾಲೇಜು ಕಟ್ಟಡ ಮತ್ತು ಹಾಸ್ಟೇಲ್ ಸೇರಿದಂತೆ ಶಿಥಿಲಗೊಂಡ ಪ್ರಮುಖ ೧೧ ಪಾರಂಪರಿಕ ಕಟ್ಟಡಗಳನ್ನು ಕೆಡವಿ ಪುನರ್‌ನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿದೆ.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮತ್ತು ಪರಂಪರೆ ಸಮಿತಿಯು ೧೨೯ ಪಾರಂಪರಿಕ ಕಟ್ಟಡ ರಚನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದು, ೧೧ ಪಾರಂಪರಿಕ ಕಟ್ಟಡಗಳನ್ನು ತಕ್ಷಣ ಮರುಸ್ಥಾಪಿಸುವಂತೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಲ್ಯಾನ್ಸ್‌ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ಮಹಾರಾಣಿ ಕಾಲೇಜುಮತ್ತು ಹಾಸ್ಟೆಲ್ ಕಟ್ಟಡ ನೆಲಸಮ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಕಟ್ಟಡಗಳ ಹೊಸ ರಚನೆಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ಸಂಬಂದಪಟ್ಟಂತಹ ಇಲಾಖೆಗಳಿಗೆ ಸೂಚನೆ ನೀಡಿದೆ. ಶಿಥಿಲಗೊಂಡಿರುವ ಪಾರಂಪರಿಕ ಕಟ್ಟಡಗಳ ಸಮೀಕ್ಷೆ ನಡೆಸಿದ ಪಾರಂಪರಿಕ ಸಮಿತಿಯು, ವಾಣಿ ವಿಲಾಸ ಮಾರುಕಟ್ಟೆ, ಅಠಾರ ಕಚೇರಿ, ಅಗ್ನಿಶಾಮಕ ದಳದ ಕಟ್ಟಡ, ಮಹಾರಾಣಿ ವಿಜ್ಞಾನ ಕಾಲೇಜು, ಬಾಲಕಿಯರ ಸರಕಾರಿ ಶಾಲೆ, ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಸಂಗೀತ ವಿವಿ, ಸರ್ಕಾರಿ ಬಾಲ ಗೃಹ, ಮಹಾರಾಜ ಸಂಸ್ಕೃತ ಪಾಠಶಾಲೆ ಕಟ್ಟಡಗಳನ್ನು ತಕ್ಷಣ ಮರುಸ್ಥಾಪಿಸುವಂತೆ ಶಿಫಾರಸು ಮಾಡಿದ್ದು, ಈ ಕುರಿತ ವಿಸ್ತೃತ ವರದಿಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ಸಲ್ಲಿಸಿದೆ.
ತಜ್ಞರ ಸಮಿತಿಯು ಈ ೧೧ ರಚನೆಗಳ ಜೀರ್ಣೋದ್ಧಾರಕ್ಕೆ ೯೬,೮೦,೫೯,೮೩೮ ರೂ.ಗಳ ವೆಚ್ಚವಾಗಲಿದೆ ಎಂದು ಅಂದಾಜಿಸಿದೆ. ಪಾರಂಪರಿಕ ಸಮಿತಿ ಸದಸ್ಯ ಹಾಗೂ ತಜ್ಞ ಪ್ರೊ.ರಂಗರಾಜು ಅವರು ಪಾರಂಪರಿಕ ಕಟ್ಟಡಗಳ ಸ್ಥಿತಿಗತಿಯ ವರದಿಯ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಾಣಿ ವಿಲಾಸ ಮಾರುಕಟ್ಟೆ ಮತ್ತು ಮಂಡಿ ಮೊಹಲ್ಲಾದ ಚಿಕ್ಕ ಮಾರುಕಟ್ಟೆಯ ಸ್ಥಿತಿಗತಿ ಕುರಿತು ಪ್ರಶ್ನಿಸಿದರು. ಇದೇ ವೇಳೆ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ, ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ಹಾಸ್ಟೆಲ್ ಅನ್ನು ನೆಲಸಮಗೊಳಿಸಲು ಸರ್ಕಾರ ಬದ್ಧವಾಗಿದೆ ಮತ್ತು ಈ ಆರ್ಥಿಕ ವರ್ಷದಲ್ಲಿ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.
ಇದೇ ರೀತಿಯ ರಚನೆಯನ್ನು ಕಾಪಾಡಿಕೊಳ್ಳಲು ಮತ್ತು ಪಾರಂಪರಿಕ ನೋಟವನ್ನು ಉಳಿಸಿಕೊಳ್ಳಲು ಸರ್ಕಾರ ಬಯಸಿದೆ, ಆದರೆ, ವ್ಯಾಪಾರಸ್ಥರು ಮತ್ತು ಮಾರುಕಟ್ಟೆಗೆ ಭೇಟಿ ನೀಡುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಸುರಕ್ಷತೆಯನ್ನು ಪರಿಗಣಿಸಿ ಹೊಸ ಕಟ್ಟಡವನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈಗಿರುವ ಕಟ್ಟಡಗಳನ್ನೇ ಮರುಸ್ಥಾಪಿಸಲು ಕೆಲವು ತಜ್ಞರು ಸಲಹೆ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಕಟ್ಟಡ ಕೆಡವಲು ಸರ್ಕಾರ ನಿರ್ಧರಿಸಿದೆ. ನಿರ್ಮಾಣ ಕಾರ್ಯವನ್ನು ಶೀಘ್ರಗತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಮುಂದಿನ ನಾಲ್ಕು ವರ್ಷಗಳಲ್ಲಿ ಅನೇಕ ಪಾರಂಪರಿಕ ಕಟ್ಟಡಗಳನ್ನು ಮರುಸ್ಥಾಪಿಸಲಾಗುವುದು, ಇವುಗಳಿಗೆ ಹಂತಹಂತವಾಗಿ ಹಣವನ್ನು ಮಂಜೂರು ಮಾಡಲಾಗುವುದು, ಯಾವುದೇ ಸರ್ಕಾರವು ಒಂದೇ ಬಾರಿಗೆ ೧೦೦ ಕೋಟಿ ರೂ.ಗಳನ್ನು ಮೀಸಲಿಡುವುದು ಕಷ್ಟಕರವಾಗುತ್ತದೆ, ಸರ್ಕಾರಕ್ಕೂ ಹಲವಾರು ಆದ್ಯತೆಗಳಿವೆ ಎಂದು ಹೇಳಿದರು.
ಎರಡು ಬಾರಿ ಕುಸಿದಿದ್ದ ದೇವರಾಜ ಮಾರುಕಟ್ಟೆ: ನಗರದ ಹೃದಯ ಭಾಗದಲ್ಲಿರುವ ೧೨೫ ವರ್ಷಗಳ ಇತಿಹಾಸವುಳ್ಳ ದೇವರಾಜ ಮಾರುಕಟ್ಟೆ ಸದಾಕಾಲ ಜನರಿಂದ ತುಂಬಿರುತ್ತದೆ. ಇದು ಪಾರಂಪರಿಕ ಕಟ್ಟಡವೂ ಹೌದು. ಇಲ್ಲಿಯವರೆಗೆ ಎರಡು ಬಾರಿ ಕಟ್ಟಡದ ಚಾವಣಿ ಕುಸಿದಿದೆ. ೨೦೦೫ರಲ್ಲಿ ಸಯ್ಯಾಜಿ ರಸ್ತೆಗೆ ಮುಖ ಮಾಡಿರುವ ಪೂರ್ವ ಭಾಗದ ಎರಡು ಮಳಿಗೆಗಳ ಚಾವಣಿ ಕುಸಿದಿತ್ತು, ಬಳಿಕ ೨೦೧೬ ರಲ್ಲಿ ಮಾರುಕಟ್ಟೆಯ ಉತ್ತರ ಪ್ರವೇಶದ್ವಾರದ, ಧನ್ವಂತರಿ ರಸ್ತೆಯಿಂದ ಮಾರುಕಟ್ಟೆ ಪ್ರವೇಶಿಸುವ ದ್ವಾರದ ಒಳಭಾಗದಲ್ಲಿ ಕಟ್ಟಡ ಕುಸಿದಿತ್ತು. ಅಲ್ಲದೇ, ಆಗಾಗ್ಗೆ ಮಾರುಕಟ್ಟೆಯಲ್ಲಿ ಬೆಂಕಿ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಮಾರುಕಟ್ಟೆಯಲ್ಲಿ ಒಟ್ಟು ೮೨೨ ಮಳಿಗೆಗಳಿದ್ದು, ೨೫೦ ತೆರೆದ ಮಳಿಗೆಗಿವೆ, ಒಟ್ಟು ೧೦೭೨ ವ್ಯಾಪಾರಸ್ಥರು ಇದ್ದಾರೆ. ಮಾರುಕಟ್ಟೆಯೂ ಶಿಥಿಲಗೊಂಡಿರುವುದರಿಂದ ಒಡೆದು ಕಟ್ಟಬೇಕು ಎಂದು ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.
