ಹಾಸನ : ಪ್ರತಿಯೊಂದು ಮಗುವು ಉತ್ತಮ ವಿದ್ಯಾಭ್ಯಾಸ ನಡೆಸಿ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಉದ್ಯೋಗದಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಹೊಂದುವAತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯ ಎಸ್ ಎಸ್ ಎಲ್ ಸಿ ಉತ್ತಮ ಫಲಿತಾಂಶ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗುಣಮಟ್ಟದ ಭೋದನೆ ಮತ್ತು ಕಲಿಕೆಗೆ ಕ್ರಮ ಕೈಗೊಳ್ಳುವ ಬಗ್ಗೆ ವಿಡಿಯೋ ಸಂವಾದದ ಮೂಲಕ ಮಕ್ಕಳನ್ನು ಕುರಿತು ಮಾತನಾಡಿದ ಅವರು ಶಿಕ್ಷಕರು ಉತ್ತಮವಾಗಿ ಭೋಧನೆ ಮಾಡುವ ಮೂಲಕ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಮುತುವರ್ಜಿ ವಹಿಸುವಂತೆ ತಿಳಿಸಿದರು.
ಯಶಸ್ಸು ಕಾರ್ಯಕ್ರಮವು ಮಕ್ಕಳ ಉತ್ತಮ ಭವಿಷ್ಯಕ್ಕೆ ಬುನಾದಿ ಆಗಿದ್ದು, ಜೀವನದಲ್ಲಿ ಮಕ್ಕಳು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಆಗುವಂತೆ ಈ ಕಾರ್ಯಕ್ರಮದ ಮೂಲಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಒಂದು ಕಾಲದಲ್ಲಿ ಉದ್ಯೋಗಂ ಪುರುಷ ಲಕ್ಷಣಂ ಎಂದು ಹೇಳಲಾಗುತ್ತಿತ್ತು ಆದರೆ ಇಂದಿನ ದಿನಗಳಲ್ಲಿ ಉದ್ಯೋಗ ಸರ್ವರ ಲಕ್ಷಣ ಎಂಬತ್ತಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಮಗುವೂ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಪ್ರತಿಯೊಬ್ಬರು ಕೆಲಸ ಮಾಡುವ ಮೂಲಕ ಆರ್ಥಿಕ ಸಬಲತೆ ಸಾಧಿಸಬೇಕು ಎಂದರು.
ಎಸ್.ಎಸ್.ಎಲ್.ಸಿ ಹಂತದಲ್ಲಿಯೇ ಮುಂದೆ ಯಾವ ರೀತಿಯ ಕೆಲಸ ಮಾಡಬೇಕು ಎಂದು ನಿರ್ಧರಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ನಡೆಸಿ ಎಂದು ತಿಳಿಸಿದರಲ್ಲದೆ, ಜೀವನಕ್ಕೆ ವಿದ್ಯೆ ಭದ್ರ ಬುನಾದಿ, ವಿದ್ಯಾಭ್ಯಾಸ ಮುಗಿಸಿದ ತಕ್ಷಣ ಕೆಲಸ ದೊರೆಯುವುದಿಲ್ಲ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಕೆಲಸ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ಯಾವುದೇ ನೆಪ ನೀಡಿ ಶಾಲೆಗೆ ಗೈರು ಹಾಜರಾಗಬಾರದು. ಈ ಕಾರ್ಯಕ್ರಮದ ಮೂಲಕ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪ್ರಯತ್ನಿಸಲಾಗಿ 6ನೇ ವಾರ ತಲುಪಿದೆ, ಜೀವನದಲ್ಲಿ ಯಶಸ್ಸು ಕಾಣಲು ಎಲ್ಲಾ ಸುಖವನ್ನು ತ್ಯಾಗ ಮಾಡಿ ಸಾಧನೆ ಮಾಡಬೇಕು ಎಂದ ಅವರು ಸಮಾಜದಲ್ಲಿ ಗೌರವ ಪಡೆಯಲು, ನೆಮ್ಮದಿ ಬದುಕು ಕಟ್ಟಿಕೊಳ್ಳಲು, ದೇಶಕ್ಕೆ ಕೊಡುಗೆ ನೀಡಲು ಒಳ್ಳೆಯ ದಾರಿ ಆಯ್ಕೆ ಮಾಡಿಕೊಂಡು ಉತ್ತಮ ದಾರಿಯಲ್ಲಿ ನಡೆಯಬೇಕು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಗೌರಿ ಗಣೇಶ ಹಬ್ಬದ ಶುಭಾಶಗಳನ್ನು ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಲರಾಮ, ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.