ಮೈಸೂರು: ಮನುಷ್ಯರಾದವರಿಗೆ ಅನೇಕ ಸಮಸ್ಯೆಗಳು ಇದ್ದೆ ಇರುತ್ತವೆ. ಅವುಗಳ ನಡುವೆ ನಗು ನಗುತ್ತಾ ಬದುಕು ಸಾಗಿಸಬೇಕು ಎಂದು ಅಂಕಣಕಾರ ಎಸ್. ಷಡಕ್ಷರಿಯವರು ಬಿಳಿಗಿರಿರಂಗನಬೆಟ್ಟದ ಜೆಎಸ್‌ಎಸ್ ಆಶ್ರಮದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಆಶೀರ್ವಾದ ಗಳೊಂದಿಗೆ ಸಾರ್ವಜನಿಕರಿಗಾಗಿ ಏರ್ಪಡಿಸಿರುವ ಜೀವನೋತ್ಸಾಹ ಶಿಬಿರದ ಎರಡನೇ ದಿನ ಜೀವನ ಮತ್ತು ನಗು ಕುರಿತು ಉಪನ್ಯಾಸ ನೀಡುತ್ತಾ ತಿಳಿಸಿದರು.
ಪ್ರಾಣಿ ಸಂಕುಲದಲ್ಲಿಯೇ ನಗುವ ಏಕೈಕ ಪ್ರಾಣಿ ಮನುಷ್ಯ ಮಾತ್ರ. ಒಂದು ದಿನ ನಗದಿದ್ದರೂ ಬದುಕು ವ್ಯರ್ಥವಾದಂತೆ. ಅನೇಕ ರೋಗಗಳಿಗೆ ನಗುವೆ ದಿವ್ಯೌ ಧವಾಗಿದೆ. ಮನುಷ್ಯರು ನಗುನಗುತ ಜೀವಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ರವರು ಸಮಾಜದ ಕನ್ನಡಿಯೇ ಪತ್ರಿಕೆಯಾಗಿದೆ. ಪತ್ರಿಕೆಗಳನ್ನು ಓದುವುದೇ ಒಂದು ಕಲೆಯಾಗಿದೆ. ಓದುಗರಿಗೆ ಹೊಸ ವಿಷಯಗಳನ್ನು ತಲುಪಿಸುವ ಧಾವಂತ ಪತ್ರಕರ್ತರದ್ದಾಗಿರುತ್ತದೆ. ಭಾಷೆಯ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಅನನ್ಯ ಎಂದು ತಿಳಿಸಿದರು. ಕುಂದೂರು ಮಠದ ಡಾ. ಶರತ್‌ಚಂದ್ರ ಸ್ವಾಮಿಗಳು ಸಂಸ್ಕಾರವು ಜೀವನವನ್ನು ರೂಪಿಸುತ್ತದೆ. ವಿದ್ಯೆಗೂ ಸಂಸ್ಕಾರಕ್ಕೂ ಸಂಬಂಧವಿಲ್ಲ. ಪ್ರತಿಯೊಬ್ಬರು ಸಂಸ್ಕಾರವಂತರಾಗಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಸಂಸ್ಕಾರಗಳು ಯಾಂತ್ರಿಕವಾಗಬಾರದು ಎಂದು ತಿಳಿಸಿದರು.
ಶಿಬಿರಾರ್ಥಿಗಳು ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ-ಧ್ಯಾನದಲ್ಲಿ ಪಾಲ್ಗೊಂಡಿದ್ದರು. ಸಂಜೆ ದೇಸಿ ಆಟಗಳನ್ನು ಆಡಿದರು. ಸಾಮೂಹಿಕ ಪ್ರಾರ್ಥನೆ ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಶಿಬಿರದಲ್ಲಿ ತುಮಕೂರು, ಬೆಳಗಾವಿ, ಬೆಂಗಳೂರು, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ೭೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.