Friday, April 11, 2025
Google search engine

Homeಕಲೆ-ಸಾಹಿತ್ಯಮೈಸೂರು ಸಾಹಿತ್ಯ ಸಂಭ್ರಮಕ್ಕೆ ಚಾಲನೆ

ಮೈಸೂರು ಸಾಹಿತ್ಯ ಸಂಭ್ರಮಕ್ಕೆ ಚಾಲನೆ

ಮೈಸೂರು: ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿರುವ ಮೈಸೂರು ಸಾಹಿತ್ಯ ಸಂಭ್ರಮ-೨೦೨೪ ೮ನೇ ಅವೃತ್ತಿ ಶನಿವಾರ ಚಾಲನೆಗೊಂಡಿತು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಜ್ಞಾನ ದೀವಿಗೆ ಬೆಳಗುವ ಮೂಲಕ ಸಾಹಿತ್ಯ ಸಂಭ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಇಂತಹ ಸಾಹಿತ್ಯ ಉತ್ಸವ-ಸಂಭ್ರಮಗಳು ಲೇಖಕರ ಅಭಿವ್ಯಕ್ತಿಯನ್ನು ಪ್ರಕಟಗೊಳಿಸಲು ಉತ್ತಮ ವೇದಿಕೆಯಾಗಿವೆ. ಮೈಸೂರು ಅಂದಿನ ಕಾಲದಿಂದಲೂ ಸಾಹಿತ್ಯ-ಸಂಸ್ಕೃತಿಗೆ ಹೆಸರುವಾಸಿ. ಇಂತಹ ನೆಲದಲ್ಲಿ ನಡೆಯುತ್ತಿರುವ ಈ ಉತ್ಸವ ವರ್ಷದಿಂದ-ವರ್ಷಕ್ಕೆ ಹೆಚ್ಚು-ಹೆಚ್ಚು ಜನರನ್ನು ತಲುಪುತ್ತಿರುವುದು ಶ್ಲಾಘನೀಯ ಎಂದರು.

ಕನ್ನಡ ಚಲನಚಿತ್ರರಂಗದ ನಾಯಕ ನಟ-ನಿರ್ದೇಶಕ ರಮೇಶ್ ಅರವಿಂದ್ ಮಾತನಾಡಿ, ಪ್ರತಿ ಪುಟ ಓದಿದಾಗಲೂ ಮುಂದಾ.. ಎಂಬ ಕುತೂಹಲ ಮೂಡಿಸುತ್ತದೆಯೋ ಅದೇ ಅತ್ಯುತ್ತಮ ಪುಸ್ತಕ. ಅತ್ಯುತ್ತಮ ಪುಸ್ತಕಗಳನ್ನು ಓದಿದಾಗ ನಿಮ್ಮೊಳಗೊಂದು ನದಿ ಹರಿದ ಅನುಭವವಾಗುತ್ತದೆ. ಭಾರತದಲ್ಲಿ ಸರಸ್ವತಿ ನದಿಯನ್ನು ಮೃತ ನದಿ, ಗುಪ್ತಗಾಮಿನಿ ಎನ್ನುತ್ತಾರೆ. ಕೆಲವರು ಅದು ಈಗಲೂ ಜೀವಂತವಾಗಿದೆ ಎನ್ನುತ್ತಾರೆ. ಅದೇನೇ ಆದರೂ ಪುಸ್ತಕಗಳನ್ನು ಓದಿದಾಗ ನಮ್ಮ-ನಿಮ್ಮಲ್ಲೊಬ್ಬಳು ಸರಸ್ವತಿ ನದಿ ಹರಿಯುತ್ತಾಳೆ ಎಂದು ಪುಸ್ತಕದ ಮಹತ್ವವನ್ನು ಬಣ್ಣಿಸಿದರು.

ನನ್ನ ಜೀವನದ ಒಂದೊಂದು ಘಟ್ಟದಲ್ಲಿನ ಅನುಭವ ಮತ್ತು ಸಾಹಿತ್ಯಾಸಕ್ತಿಯ ಕಾರಣದಿಂದ ಪ್ರೀತಿಯಿಂದ ರಮೇಶ್ ಕಾರ್ಯಕ್ರಮ ಆರಂಭಿಸುವಂತಾಯಿತು. ನಾನು ಸಾಕಷ್ಟು ಪುಸ್ತಕಗಳನ್ನು ಓದಿ ಸಂತೋಷಪಟ್ಟಿದ್ದೇನೆ. ನನ್ನ ಸಾಹಿತ್ಯದ ಜೊತೆಗಿನ ಜೀವನ ವೈವಾಹಿಕ ಜೀವನಕ್ಕಿಂತಲೂ ೧೦ ವರ್ಷ ಹಿರಿದು. ಈ ಸುಧೀರ್ಘ ಅವಧಿಯಲ್ಲಿ ನಾನು ಅನೇಕ ಮಹನೀಯರ, ಲೇಖಕರ, ಸಾಹಿತಿಗಳ ತತ್ವ-ಸಿದ್ಧಾಂತಗಳನ್ನು ಕಲಿಯಲು ತೀವ್ರವಾಗಿ ಪ್ರಯತ್ನಿಸಿದ್ದೇನೆ. ಅದರಲ್ಲಿ ಭಾಗಶಃ ಸಫಲತೆಯನ್ನೂ ಕಂಡಿದ್ದೇನೆ ಎಂದು ಅವರು ಹೇಳಿದರು.
ಮೈಸೂರಿಗೆ ನಾನು ಸಾಕಷ್ಟು ಬಾರಿ ಭೇಟಿ ನೀಡಿದ್ದೇನೆ.

ಆಪ್ತಮಿತ್ರ, ಏಕದಂತ, ಪ್ರಸ್ತುತ ಕೆಡಿ ಸೇರಿದಂತೆ ಅನೇಕ ಸಿನಿಮಾಗಳು ಇಲ್ಲಿ ಚಿತ್ರೀಕರಣವಾಗಿವೆ. ಈ ಸಾಹಿತ್ಯ ಸಂಭ್ರಮದಲ್ಲಿ ಯಾವ ವಿಷಯದಿಂದ ಮಾತನ್ನು ಆರಂಭಿಸಬೇಕು ಎಂಬ ಗೊಂದಲ ನನ್ನಲ್ಲಿ ಮನೆ ಮಾಡಿತ್ತು. ಸಿನಿಮಾ, ದಸರಾ, ಆನೆ ಹೀಗೆ ಅನೇಕ ವಿಷಯಗಳು ಸ್ಮೃತಿಪಟಲದಲ್ಲಿ ಹಾಗೇ ಬಂದು ಹೀಗೆ ಹೋದವು. ಸಾಹಿತ್ಯವೂ ಹಾಗೆ ಯಾವ ಸಂದರ್ಭದಲ್ಲಿ ಆಲೋಚನೆಗಳು ಮನಸ್ಸಿಗೆ ಬರುತ್ತದೆಯೋ ಆ ಕ್ಷಣದಲ್ಲಿ ಬರೆದು ಮುಗಿಸಬೇಕು ಎಂದರು.

ನೀವು ಒಬ್ಬ ಬರಹಗಾರರಾಗಬೇಕಾದರೆ ಎಷ್ಟು ಶ್ರಮ ಇರುತ್ತದೆ. ಪ್ರತಿ ವಾಕ್ಯ ಬರೆಯುವಾಗಲೂ ಪ್ರಾಣ ಬಿಡಬೇಕು ಅಷ್ಟೆ. ಆದರೆ ಪುಸ್ತಕ ಸಿದ್ಧವಾಗಿ ಓದುಗನ ಕೈ ಸೇರುವ ಸಂದರ್ಭದ ಸೌಂದರ್ಯ ದೊಡ್ಡದು. ಅದು ಓದುಗ ಮತ್ತು ಬರಹಗಾರನ ನಡುವಿನ ಸುಂದರವಾದ ಸಂಪರ್ಕ. ಅರ್ಧ ಓದುಗನ ಸತ್ಯ ಮತ್ತು ಅರ್ಧ ಬರಹಗಾರನ ಸತ್ಯ ಸೇರಿ ಪೂರ್ಣ ಸತ್ಯವಾಗಿ ಹೊರ ಹೊಮ್ಮುತ್ತದೆ ಎಂದು ಅವರು ಹೇಳಿದರು.

ಸಾಹಿತ್ಯದ ಜತೆಗಿನ ನನ್ನ ಸಂಬಂಧವು ಜ್ಞಾನ, ಸಂತೋಷ ಮತ್ತು ಉತ್ತೇಜನವನ್ನು ನೀಡಿದೆ. ಬರಹವು ಒಂದು ರೀತಿಯಲ್ಲಿ ವಿಭಿನ್ನ ಆಲೋಚನೆಯನ್ನು ಹೊಂದಿರುತ್ತದೆ. ನಾವು ಪ್ರಪಂಚವನ್ನು ಯಾವ ಬಣ್ಣದ ಗಾಜಿನಿಂದ ನೋಡುತ್ತೇಯೋ ಆ ಬಣದಲ್ಲಿ ಪ್ರಪಂಚ ಕಾಣುತ್ತದೆ. ಹೂಮಳೆ ಚಿತ್ರವನ್ನು ಅಸ್ಸಾಂನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಸಿನಿಮಾದಲ್ಲಿ ನದಿಯನ್ನು ಪೂರ್ತಾ ರಕ್ತಸಿಕ್ತವಾಗಿರುವಂತೆ ಚಿತ್ರೀಕರಣ ಮಾಡಬೇಕಾಗಿತ್ತು. ಆದರೆ ಅಷ್ಟು ಬಜೆಟ್ ನಮ್ಮಲ್ಲಿ ಇರಲಿಲ್ಲ. ಆಗ ಲೇಖಕ ಆರ್.ಕೆ.ನಾರಾಯಣ ಅವರ ಕೋಟ್ಸ್ ಜ್ಞಾಪಕಕ್ಕೆ ಬಂತು.

ಕೆಂಪು ಗಾಜನ್ನು ಕ್ಯಾಮೆರಾದ ಮುಂದೆ ಇಟ್ಟು ಬ್ರಹ್ಮಪುತ್ರ ನದಿಯನ್ನು ನೋಡಿದಾಗ ನದಿಯ ನೀರೆಲ್ಲ ರಕ್ತದಂತೆ ಗೋಚರಿಸಿತು. ಇದೇ ಅಲ್ಲವೇ ಸಾಹಿತ್ಯದ ಶಕ್ತಿ ಎಂದು ನೆನಪುಗಳ ರೀಲ್ಸ್ ಅನ್ನು ಪ್ರದರ್ಶನಗೊಳಿಸಿದರು.
ಪರಿಸರವಾದಿ ಸುರೇಶ್ ಹೆಬ್ಳೀಕರ್, ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್‌ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಪದಾಧಿಕಾರಿಗಳಾದ ಸ್ಯಾಮ್ ಚರಿಯನ್, ಸಿ.ಆರ್. ಹನುಮಂತ್, ದಿವ್ಯಶ್ರೀ, ಸುಚಿತಾ, ರೆಹಾನ್ ಇರಾನಿ, ಆಂಗ್ಲ ಲೇಖಕ ಅರೂನ್ ರಾಮನ್ ಇದ್ದರು.

ಸೂರ್ಯಕಾಂತಿ ಕಿರುಚಿತ್ರಕ್ಕೆ ಮೆಚ್ಚುಗೆ ಮೈಸೂರಿನವರೇ ಆದ ಚಿದಾನಂದ ನಾಯಕ್ ನಿರ್ದೇಶನ ಮಾಡಿರುವ ಹಾಗೂ ಪ್ರತಿಷ್ಠಿತ ಕಾನ್ ಚಿತ್ರೋತ್ಸದಲ್ಲಿ ಕಿರುಚಿತ್ರ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಕನ್ನಡದ ೧೬ ನಿಮಿಷದ ಕಿರುಚಿತ್ರ ಸೂರ್ಯಕಾಂತಿ ಹೂವುಗಳಿಗೆ ಮೊದಲು ಗೊತ್ತಾಗಿದ್ದು ಅನ್ನುವ ಸಾಹಿತ್ಯ ಸಂಭ್ರಮದಲ್ಲಿ ಪ್ರದರ್ಶನ ಮಾಡಲಾಯಿತು. ನೆರೆದಿದ್ದ ಸಾಹಿತ್ಯಜೀವಿಗಳು, ಲೇಖಕರು ಚಿತ್ರವನ್ನು ತದೆಕಚಿತ್ತದಿಂದ ನೋಡಿ, ಮುಗಿದ ಹೊತ್ತಿಗೆ ಭಾರೀ ಕರತಾಡನ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular