Thursday, April 3, 2025
Google search engine

Homeರಾಜಕೀಯಮೈ-ಬೆಂ ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ: ನಿಷ್ಪಕ್ಷಪಾತ ತನಿಖೆ ಆಗಲಿ

ಮೈ-ಬೆಂ ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ: ನಿಷ್ಪಕ್ಷಪಾತ ತನಿಖೆ ಆಗಲಿ

ಮಾಧ್ಯಮ ಸಂವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಗ್ರಹ

ಮೈಸೂರು-ಬೆಂಗಳೂರು ರಾಷ್ಟ್ರೀಯ ದಶಪಥ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಿಂದ ಕೂಡಿದ್ದು,ಈ ಸಂಬಂಧ ಸಮಗ್ರ ತನಿಖೆಯಾಗಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಗ್ರಹಿಸಿದರು.
ನಗರದ ಪತ್ರಕರ್ತರ ಸಂಘದ ಆವರಣದಲ್ಲಿ ಮಾಧ್ಯಮದವರೊಂದಿಗೆ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿ, ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯಲ್ಲಿ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲ, ಅಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ. ಪ್ರಾಥಮಿಕ ಚಿಕಿತ್ಸಾ ಸೌಲಭ್ಯವಿಲ್ಲ.
ಬಹುಶಃ ಇಡೀ ರಾಷ್ಟçದಲ್ಲಿ ಇಷ್ಟು ಕಳಪೆಯಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿ ಬಹುಶಃ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮೈ-ಬೆಂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ದೇಶದ ಪ್ರಧಾನಿ ನರೇಂದ್ರಮೋದಿ ಅವರು ವಿಧಾನಸಭಾ ಚುನಾವಣಾ ದೃಷ್ಟಿಯಿಂದ ತರಾತುರಿಯಲ್ಲಿ ಉದ್ಘಾಟಿಸಿ ಹೋದರು. ಆದರೆ, ಇನ್ನು ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳದೇ ಉದ್ಘಾಟಿಸಿದ್ದೇಕೆ ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿಗೆ ರೈತರಿಂದ ಭೂ ಸ್ವಾಧೀನ ಮಾಡಿಸಿಕೊಂಡಿ
ರುವುದರಲ್ಲೂ ಸಾಕಷ್ಟು ಅವ್ಯವಹಾರಗಳು ನಡೆದಿವೆ.ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಣೆಯಾಗಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.
ಈ ಸಂಬಂಧ ನಿಷ್ಪಕ್ಷಪಾತ ತನಿಖೆಯಾಗಬೇಕು.ತಪ್ಪಿತಸ್ಥರು ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು-ಮೈಸೂರು ಮಾರ್ಗ ಮಧ್ಯೆ ಬರುವ ಮಂಡ್ಯ ನಗರಕ್ಕೆ ಹೆದ್ದಾರಿ ಪ್ರವೇಶ ಹಾಗೂ ನಿರ್ಗಮನದ ಬಗ್ಗೆಯೂ ಸ್ಪಷ್ಟವಾಗಿ ಮಾಹಿತಿ ಇಲ್ಲ.ಈ ಎಲ್ಲ ಗೊಂದಲಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ಅನುಕೂಲ ಕಲ್ಪಿಸಿಕೊಡುವ ಭರವಸೆ ನೀಡಿದರು.
ಬೇಸಿಗೆ ಬೆಳೆಗೆ ನೀರು ಹರಿಸಲು ಕ್ರಮ:ನಿಗಧಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿಲ್ಲ. ಕೇರಾಳದಲ್ಲಿ ಮಾನ್ಸೂನ್ ಮಳೆ ಇದೀಗ ತಾನೇ ಪ್ರಾರಂಭವಾಗಿದೆ. ಇನ್ನೆರಡ್ಮೂರು ದಿನಗಳಲ್ಲಿ ಮುಂಗಾರು ಮಳೆ ರಾಜ್ಯ ಪ್ರವೇಶ ಮಾಡುವ ನಿರೀಕ್ಷೆ ಇದೆ ಎಂದರು.
ಕೆ.ಆರ್.ಎಸ್. ಜಲಾಶಯದಲ್ಲಿ ೮೨ ಅಡಿ ನೀರಿದೆ. ಒಣಗುತ್ತಿರುವ ಬೆಳೆಗಳಿಗೆ ಕೆಆರ್‌ಎಸ್ ಜಲಾಶಯದಿಂದ ನೀರು ಹರಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ.ಕಟಾವಿಗೆ ಬಂದಿರುವ ಬೆಳೆಗಳಿಗೆ ನೀರಿನ ಕೊರತೆ ಎದುರಾಗುವುದಿಲ್ಲ ಎಂದರು.
ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ:ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆ ಪ್ರಾರಂಭ ಮಾಡಲು ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ೫೦ ಕೋಟಿ ಅನುದಾನ ಮಂಜೂರು ಮಾಡಿದ್ದಾರೆ.ಸಧ್ಯದಲ್ಲೇ ಕಾರ್ಖಾನೆ ಪ್ರಾರಂಭ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ಹೊಸ ಕಾರ್ಖಾನೆ ಸ್ಥಾಪನೆಗೆ ರೂಪುರೇಷೆ ತಯಾರಿಸಲು ಅಧಿಕಾರಿಗಳಿ ಸೂಚಿಸಲಾಗಿದೆ. ಅವಶ್ಯಕತೆ ಬಿದ್ದರೆ ಹೊಸ ಕಾರ್ಖಾನೆ ಸ್ಥಾಪನೆಗೆ ಸರ್ಕಾರದ ಜೊತೆ ಚರ್ಚಿಸಿ ಮುಂದಾಗುವುದಾಗಿ ಹೇಳಿದರು.
ಕಾರ್ಖಾನೆಗೆ ಅಗತ್ಯವಿರುವ ಹೊಸ ಯಂತ್ರೋಪಕರಣಗಳನ್ನು ಅಳವಡಿಸಿ ಕಾರ್ಖಾನೆ ಯಾವುದೇ ಲೋಪವಿಲ್ಲದಂತೆ ಸುಸೂತ್ರವಾಗಿ ನಡೆಯಲು ಮುತುವರ್ಜಿ ವಹಿಸುವುದಾಗಿ ಹೇಳಿದರು.
ದಳಪತಿಗಳಿಂದ ಜಿಲ್ಲೆಯ ಅಭಿವೃದ್ಧಿ ನಿರ್ಲಕ್ಷ್ಯ :೨೦೧೮ ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಏಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರು.ಆದರೆ, ದಳಪತಿಗಳು ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು.ಹಾಗಾಗಿ ಈ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕರಿಗೆ ಟಾಂಗ್ ನೀಡಿದರು.
ಅಭಿವೃದ್ಧಿ ದೃಷ್ಟಿಯಿಂದ ಮಂಡ್ಯ ಜಿಲ್ಲೆ ಬಹಳ ಹಿನ್ನೆಡೆಯಾಗಿದೆ.ಅದರ ಬಗ್ಗೆ ನನಗರಿವಿದೆ.ಜಿಲ್ಲೆಯ ಜನರು ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ಜಿಲ್ಲೆಯಿಂದ ೬ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅವರ ಋಣ ನಮ್ಮ ಮೇಲಿದೆ. ನಮಗೆ ಸ್ವಲ್ಪ ಕಾಲವಕಾಶ ಬೇಕಿದೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ನನ್ನದೇ ಆದ ಕನಸುಗಳಿವೆ. ಈ ಐದು ವರ್ಷದ ಅವಧಿಯಲ್ಲಿ ಆದ್ಯತೆ ಮೇರೆಗೆ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದರು.
ಶಕ್ತಿ ಯೋಜನೆಗೆ ಚಾಲನೆ: ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಹಿಳೆಯರಿಗೆ ಸಾರಿಗೆ ವಾಹನದಲ್ಲಿ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಸಿ.ಎಂ.ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.ಮಂಡ್ಯ ನಗರದ ಬಸ್‌ನಿಲ್ದಾಣದಲ್ಲಿ ನಾನು ಚಾಲನೆ ನೀಡುವವನಿದ್ದೇನೆ ಎಂದರು.
ಜಿಲ್ಲೆಯ ಕೆಲ ಗಡಿ ಭಾಗದಲ್ಲಿ ಸಾರಿಗೆ ಬಸ್ ವ್ಯವಸ್ಥೆಯೇ ಇಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ,ಎಲ್ಲಿಗೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲವೋ ಅಂತಹ ಕಡೇ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ವಿದ್ಯುತ್ ಬಿಲ್‌ನಲ್ಲಿ ಮಿನಿಮಮ್ ಧರ ಏರಿಕೆ ಸಂಬಂಧ ಪ್ರತಿಕ್ರಿಯಿಸಿ, ವಿದ್ಯುತ್ ಇಲಾಖೆಯನ್ನು ವಿದ್ಯುತ್ ವಿತರಣೆ ಸಂಸ್ಥೆ (ಕೆಇಆರ್‌ಸಿ) ನಿರ್ವಹಿಸಲಿದೆ.ಅವರ ಈ ನಿರ್ಧಾರದಿಂದ ಎಲ್ಲರಿಗೂ ಹೊರೆಯಾಗಿದೆ.ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಪ್ರತಿಕ್ರಿಯಿಸಿದರು.
ವಿಸಿ ಫಾರಂ ನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.
ಆಲೆಮನೆಗಳ ಸುಧಾರಣೆಗೆ ಮುಂದಾಗುವ ರೈತರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುವುದು. ಕಬ್ಬು ಬೆಳೆಗಾರರಿಗೆ ತೊಂದರೆಯಾಗದಂತೆ ಸಾವಯವ ಬೆಲ್ಲ ತಯಾರಿಕೆಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ಮಂಜುನಾಥ, ಉಪಾಧ್ಯಕ್ಷ ಬಿ.ಪಿ.ಪ್ರಕಾಶ್,ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಸೋಮ
ಶೇಖರ್ ಕೆರಗೋಡು,ಮತ್ತಿಕೆರೆ ಜಯರಾಮ್,ರಾಜ್ಯ ಕಾರ‍್ಯಕಾರಿಣಿ ಸದಸ್ಯ,ಮಂಜುನಾಥ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular