ಗುಂಡ್ಲುಪೇಟೆ: ಕಾನೂನು ಎಲ್ಲರಿಗೂ ಸಮಾನತೆ ನೀಡಿದ್ದು, ಅದನ್ನು ನಾವು ಅರಿಯಬೇಕು ಎಂದು ಜೆಎಂಎಫ್‍ಸಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಸವರಾಜ ತಳವಾರ ಸಲಹೆ ನೀಡಿದರು.
ತಾಲೂಕಿನ ಬಂಡೀಪುರ ವಲಯದ ಕಣಿಯನಪುರ ಕಾಲೋನಿಯಲ್ಲಿ ನಡೆದ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಶನ್ ಹಾಗೂ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆಗಳು, ಬಾಲ್ಯವಿವಾಹ ನಿಷೇಧ ಕಾಯ್ದೆ- 2006, ಹಾಗೂ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1986 ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಹಾಗೂ ನಿಯಮ ಅರಿವಿಲ್ಲ ಎಂದು ತಿಳಿಯದೆ ತಪ್ಪು ಮಾಡಿಬಿಟ್ಟೆ ಎಂದರೆ ಕಾನೂನು ಯಾರನ್ನು ಬಿಡುವುದಿಲ್ಲ. ಹಾಗೆಯೇ ಬಡವ, ಶ್ರೀಮಂತ, ಸರ್ಕಾರಿ, ನೌಕರ ಕೂಲಿ ಮಾಡುವವರು ಯಾರೇ ಆದರೂ ಎಲ್ಲರಿಗೂ ಕಾನೂನು ಒಂದೇ. ಅದನ್ನು ಸಂವಿಧಾನ ನಮಗೆ ನೀಡಿದೆ ಎಂದರು.
ಜೆಎಂಎಫ್‍ಸಿ ನ್ಯಾಯಾಧೀಶರಾದ ಶಿವಕುಮಾರ ಜಿ.ಜೆ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ಬಾಲ್ಯ ವಿವಾಹ ಹೆಚ್ಚಿನ ರೀತಿಯಲ್ಲಿದೆ. ಪೋಷಕರು ಜವಾಬ್ದಾರಿ ಬೇಗ ಕಳೆದುಕೊಳ್ಳಲು ಚಿಕ್ಕ ಮಕ್ಕಳಿಗೆ ಮದುವೆ ಮಾಡುವುದು ಸರಿಯಲ್ಲ. ಇದರಿಂದ ಮಕ್ಕಳ ಭವಿಷ್ಯವನ್ನು ನಾವೇ ಹಾಳು ಮಾಡಿದಂತೆ ಹಾಗೂ ಬಾಲ್ಯ ವಿವಾಹ ಮಾಡಿದರೆ ಈಗಿನ ಕಾನೂನು ತುಂಬಾ ಕಠಿಣವಾಗಿದೆ ಎಂದು ತಿಳಿಸಿದರು.
ಸಿಡಿಪಿಓ ಹೇಮಾವತಿ ಮಾತನಾಡಿ, ಶಿಕ್ಷಣ ಎಲ್ಲರೂ ಪಡೆಯಬೇಕು ಶಿಕ್ಷಣದಿಂದಲೇ ನಮ್ಮ ಜ್ಞಾನ ಹೆಚ್ಚುತ್ತದೆ ಕೇವಲ ಕೆಲಸಕ್ಕಾಗಿ ಮಾತ್ರ ಓದಬಾರದು. ನಮ್ಮ ವ್ಯಕ್ತಿತ್ವ ವಿಕಾಸನಕ್ಕೆ ಶಿಕ್ಷಣ ಅಗತ್ಯವಿದೆ ಎಂದರು.
ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಶನ್ ಸಂಸ್ಥೆ ಜಿಲ್ಲಾ ಸಂಯೋಜಕ ನಾರಾಯಣಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆ ಕೆಲಸ ಮಾಡುವಾಗ ಇಲ್ಲಿನ ಜನರ ಸಹಕಾರ ತುಂಬಾ ಚನ್ನಾಗಿತ್ತು. ಇಲ್ಲಿನ ಮಕ್ಕಳು ರಾಜ್ಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಸತ್ಯಾರ್ಥಿಯವರ ಆಶಯ ಕೂಡ ಪ್ರತಿಯೊಂದು ಮಗುವು ಶಿಕ್ಷಣ, ಕ್ರೀಡೆ ಮತ್ತು ಆಹಾರ ಪಡೆಯುವುದಾಗಿದ ಎಂದು ತಿಳಿಸಿದರು.
ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಕಾಂತಮ್ಮ ಎ.ಎನ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಕಾರ್ಮಿಕ ನಿರೀಕ್ಷಕ ನಾರಾಯಣಮೂರ್ತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಟಿ.ಎಸ್.ವೆಂಕಟೇಶ್, ವಲಯ ಅರಣ್ಯಾಧಿಕಾರಿ ದೀಪಾ, ಮಂಜುನಾಥಮ, ವಕೀಲರ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ್, ಸಿದ್ದಯ್ಯ, ಕಾರ್ಯದರ್ಶಿ, ಮಟ್ಟಸ್ವಾಮಿ, ಸಂಪನ್ಮೂಲ ವ್ಯಕ್ತಿ ಸರಸ್ವತಿ ಸೇರಿದಂತೆ ಇತರರು ಹಾಜರಿದ್ದರು.