Friday, April 11, 2025
Google search engine

Homeರಾಜ್ಯಸುದ್ದಿಜಾಲರೈತರ ಬೆಳೆಗೆ ನಿಶ್ಚಿತ ಬೆಲೆಗೆ ಕಾಯ್ದೆ ಅಗತ್ಯ: ಸಚಿವ ಈಶ್ವರ ಖಂಡ್ರೆ

ರೈತರ ಬೆಳೆಗೆ ನಿಶ್ಚಿತ ಬೆಲೆಗೆ ಕಾಯ್ದೆ ಅಗತ್ಯ: ಸಚಿವ ಈಶ್ವರ ಖಂಡ್ರೆ

ಸುತ್ತೂರು: ಇಂದು ಎಲ್ಲ ವಸ್ತುಗಳಿಗೆ ಎಂ.ಆರ್.ಪಿ. ಇದೆ. ಆದರೆ ರೈತರು ಕಷ್ಟಪಟ್ಟು ಬೆಳೆದ ಫಸಲಿಗೆ ನಿಶ್ಚಿತ ದರ ನಿಗದಿ ಆಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ರೈತರು ಬೆಳೆವ ಎಲ್ಲ ಬೆಳೆಗೆ ನಿಶ್ಚಿತ ದರ ನಿಗದಿಗೆ ಕಾಯಿದೆ ತರಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಒತ್ತಾಯಿಸಿದ್ದಾರೆ.

ನಂಜನಗೂಡು ತಾಲೂಕು ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ಶಿವಯೋಗಿ ದೇಶಿಕೇಂದ್ರ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವದ ಭಾಗವಾಗಿ ಕೃಷಿ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಅನ್ನದಾತನ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸಿಗಲೇಬೇಕು ಎಂಬುದು ತಮ್ಮ ಅಭಿಪ್ರಾಯ ಎಂದರು.

ನಮ್ಮ ದೇಶ ಸ್ವಾತಂತ್ರ್ಯ ಬಂದ ತರುಣದಲ್ಲಿ ಆಹಾರ ಸಮಸ್ಯೆ ಎದುರಿಸುತ್ತಿತ್ತು. ಆದರೆ ಇಂದು ದೇಶದ 140 ಕೋಟಿ ಜನರಿಗೆ ಆಹಾರ ಒದಗಿಸುವುದರ ಜೊತೆಗೆ ಹೆಚ್ಚುವರಿ ಆಹಾರ ಧಾನ್ಯವನ್ನು ರಫ್ತು ಮಾಡುವ ಸಾಮರ್ಥ್ಯ ಪಡೆದಿದೆ ಎಂದರೆ ಅದಕ್ಕೆ ಕರ್ಮಯೋಗಿಗಳು, ಕಾಯಕಯೋಗಿಗಳಾದ ರೈತರೇ ಕಾರಣ ಎಂದರು. ಇಂದು ರೈತರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಮಣ್ಣಿನ ಫಲವತ್ತತೆಯಲ್ಲಿ ಕುಸಿತ ಮತ್ತು ಕೃಷಿ ಕಾರ್ಮಿಕರ ಸಮಸ್ಯೆ. ರೈತರು ತಮ್ಮ ಹೊಲಗದ್ದೆಗಳ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾಂಪ್ರದಾಯಿಕ ಕೃಷಿಗೆ ಆದ್ಯತೆ ನೀಡಬೇಕು ಮತ್ತು ಯಂತ್ರೋಪಕರಣಗಳ ಬಳಕೆಯಿಂದ ಕೃಷಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಇಂಥ ಜಾತ್ರಾ ಮಹೋತ್ಸವಗಳಲ್ಲಿ ನಡೆಯುವ ಕೃಷಿ ವಿಚಾರಸಂಕಿರಣ ಮತ್ತು ವಸ್ತು ಪ್ರದರ್ಶನ ರೈತರಿಗೆ ಆಧುನಿಕ ಬೇಸಾಯ ಪದ್ಧತಿಯ ಬಗ್ಗೆ ಅರಿವು ಮೂಡಿಸುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಕಾಡಿದ್ದರೆ ನಾಡು, ಪ್ರಕೃತಿ ಪರಿಸರ ಉಳಿದರೆ ಮಾತ್ರ ಸಕಲ ಜೀವರಾಶಿ ಉಳಿಯಲು ಸಾಧ್ಯ. ರೈತರು ತಮ್ಮ ಹೊಲಗದ್ದೆಗಳ ಬದುವಿನಲ್ಲಿ ಮರ ಗಿಡ ಬೆಳೆಸಬೇಕು. ಹಸಿರು ವ್ಯಾಪ್ತಿ ಹೆಚ್ಚಿಸಬೇಕು. ವೃಕ್ಷವನ್ನು ನಾವು ರಕ್ಷಿಸಿದರೆ, ವೃಕ್ಷ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು. ಮಾನವ ವನ್ಯಜೀವಿ ಸಂಘರ್ಷ ಹೆಚ್ಚಳವಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದನ್ನು ಕಲಿಯಬೇಕು ಎಂದರು.

ಸುತ್ತೂರು ಜಾತ್ರೆ ಹತ್ತೂರಿಗೆ ಮಾದರಿ: ಸುತ್ತೂರು ಜಾತ್ರಾ ಮಹೋತ್ಸವ ಹತ್ತೂರಿಗೆ ಮಾದರಿಯಾಗಿದೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಚನ ಗಾಯನ, ಸಾಂಪ್ರದಾಯಿಕ ಕ್ರೀಡೆಗಳು, ಧಾರ್ಮಿಕ ವಿಚಾರಗಳ ಜೊತೆಗೆ ಕೃಷಿ ಸೇರಿದಂತೆ ಹಲವು ವಿಚಾರ ಸಂಕಿರಣಗಳು ನಡೆಯುತ್ತಿದ್ದು, ಮಾಹಿತಿ ಮನರಂಜನೆ ಎರಡನ್ನೂ ನೀಡುತ್ತಿದೆ. ಹೀಗಾಗಿಯೇ ಸುತ್ತೂರು ಜಾತ್ರೆ ಹತ್ತೂರಿಗೆ ಮಾದರಿ ಎಂಬ ಹೆಸರು ಬಂದಿದೆ ಎಂದರು. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಂಸತ್ ಸದಸ್ಯ ಬಸವರಾಜ ಬೊಮ್ಮಾಯಿ, ಶಾಸಕರುಗಳಾದ ಅರವಿಂದ ಬೆಲ್ಲದ್, ಸಿ.ಟಿ. ರವಿ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular