ಹುಬ್ಬಳ್ಳಿ: ಹೊರಗೆ ಸಿದ್ಧರಾಮಯ್ಯನವರ ಪರವಾಗಿ ಬಂಡೆ ತರ ನಿಂತಿದ್ದೇವೆ ಅಂತಾರೆ. ಆದರೆ ಕಾಂಗ್ರೆಸ್‌ನಲ್ಲಿ ಒಳಗೊಳಗೆ ಸಿಎಂ ಕುರ್ಚಿಗಾಗಿ ನಾಯಕರು ಸಾಲುಗಟ್ಟಿ ನಿಂತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರವಾಗಿ ಮೊದಲು ದೇಶಪಾಂಡೆ ನಾನು ರೆಡಿ ಅಂದರು, ಆಮೇಲೆ ಪರಮೇಶ್ವರ, ಡಿ.ಕೆ ಶಿವಕುಮಾರ್ ಅಂತೂ ಮೊದಲೇ ಕಾಯುತ್ತಿದ್ದಾರೆ. ಎಂ.ಬಿ. ಪಾಟೀಲ್ ಇದ್ದಾರೆ. ಸತೀಶ ಜಾರಕಿಹೊಳಿ ಪರ ಅಭಿಯಾನ ಆರಂಭವಾಗಿದೆ. ಈಗಾಗಲೇ ಪೋಸ್ಟರ್ ಹಾಕಿದ್ದಾರೆ ಅನ್ನುವ ಮಾಹಿತಿ ಇದೆ. ಕಾಂಗ್ರೆಸ್‌ನವರು ಮೊದಲು ತಮ್ಮ ಮನೆ ಸರಿ ಮಾಡಿಕೊಳ್ಳಲಿ. ಅದನ್ನು ಬಿಟ್ಟು ನಾನು ನೀಡಿದ ಹೇಳಿಕೆಗೆ ಟೀಕೆ ಮಾಡುವುದಲ್ಲ. ಎಲ್ಲಾ ಸಚಿವರು ದರ್ಶನ್ ವಿಚಾರದಲ್ಲಿ ಪ್ರತಿಕ್ರಿಯೆ ನಿಡಿದ್ದಾರೆ. ಅಷ್ಟರ ಮಟ್ಟಿಗೆ ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿದೆ ಎಂದು ಹರಿಹಾಯ್ದರು.
ನಾನು ಇವಾಗ ದುಡ್ಡು ಕೊಡ್ರಪ್ಪಾ ಅಂತಾ ಕೇಳಬೇಕು. ಬರ ಪರಿಹಾರದ ದುಡ್ಡು ಕೊಟ್ಟಿಲ್ಲ. ಅನೇಕ ಕಾಂಗ್ರೆಸ್ ಶಾಸಕರು, ಅಧಿಕಾರಿಗಳು ನಮಗೆ ದುಡ್ಡು ಕೊಡಿಸಿ ಅಂತಾ ಕೇಳುತ್ತಿದ್ದಾರೆ. ರಸ್ತೆ ಎಲ್ಲ ಹಾಳಾಗಿವೆ, ದುಡ್ಡು ಕೊಡ್ರಪ್ಪಾ ಎಂದು ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲೂ ರಸ್ತೆ ಸರಿ ಇಲ್ಲ, ಪಾಲಿಕೆಗೆ ದುಡ್ಡು ಕೊಡುತ್ತಿಲ್ಲ. ರಾಜ್ಯದಲ್ಲಿ ಆರ್ಥಿಕ ಅಸಮತೋಲನ ಉಂಟಾಗಿದೆ. ಅನ್ ಪ್ಲ್ಯಾನ್ ಗ್ಯಾರಂಟಿ ಯೋಜನೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಸಮತೋಲನ ಸೃಷ್ಟಿಯಾಗಿದೆ. ಹಿಮಾಚಲ ಪ್ರದೇಶದಂತೆ ಇಲ್ಲಿಯೂ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಇವಾಗ ಅಕ್ಕಿ ಕೊಡುತ್ತೀವಿ ಅಂದರೂ ತಗೋತಿಲ್ಲ. ಮುನಿಯಪ್ಪ ಅವರು ಬಂದು ಅಕ್ಕಿ ಕೊಡುತ್ತೀರಾ ಅಂತಾ ಕೇಳಿದರು. ನಾವು ಎಸ್ ಅಂದೀವಿ. ಆದರೆ ಸಿದ್ದರಾಮಯ್ಯ ಅನುಮತಿ ಕೊಟ್ಟಿಲ್ಯಾಕೆ ಅನ್ನುವುದನ್ನು ಮುನಿಯಪ್ಪ ಹೇಳಬೇಕು. ಅವರು ಹಿರಿಯರು. ಅವರ ಬಗ್ಗೆ ಗೌರವ ಇದೆ ಎಂದರು.
ಮಹದಾಯಿ ವಿಚಾರದಲ್ಲಿ ತಪ್ಪುದಾರಿಗೆಳೆಯುವ ಕೆಲಸ
ಮಹದಾಯಿ ಯೋಜನೆಗೆ 2ಲಕ್ಷ ಗಿಡ ಕತ್ತರಿಸಬೇಕಾಗುತ್ತದೆ. ಹೀಗಾಗಿ ಅಷ್ಟು ಸಲುಭವಾಗಿ ಇದಕ್ಕೆ ಅನುಮತಿ ಸಿಗಲ್ಲ. ಮಹದಾಯಿ ವಿಚಾರದಲ್ಲಿ ತಪ್ಪುದಾರಿಗೆಳೆಯುವ ಕೆಲಸ ನಡಿಯುತ್ತಿದೆ. ರಾಷ್ಟ್ರೀಯ ಹುಲಿ ಪ್ರಾಧಿಕಾರ ವರದಿ ಕೊಡದೇ ಇರುವುದರಿಂದ ವನ್ಯಜೀವಿ ಮಂಡಳಿ ಕ್ರಮ ಕೈಗೊಂಡಿಲ್ಲ. ಗೋವಾಕ್ಕೆ ಬೇಕಾದ ವಿದ್ಯುತ್ ಯೋಜನೆಗೆ ಅನುಮತಿ ಕೊಡಲಾಗಿದೆ ಎಂಬುದು ಸುಳ್ಳು. ಗೋವಾ ರಾಜ್ಯಕ್ಕೆ ಮಾತ್ರ ವಿದ್ಯುತ್ ಅಂತ ಅಲ್ಲ. ದಾಬೋಲ್‌ನಿಂದ ಬರುವ ಮಾರ್ಗಗಳಲ್ಲಿ ಬರುವ ಪ್ರದೇಶಕ್ಕೆ ನೆರವಾಗುತ್ತದೆ. ಇದು ರೈತರಿಗೆ, ಸಾಮಾನ್ಯ ಜನರಿಗೆ 24 ತಾಸು ವಿದ್ಯುತ್ ಕೊಡುವ ಯೋಜನೆಯಾಗಿದೆ. ಈಗಲೂ ಮರು ಪರಿಶೀಲನೆಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.
ಮಹದಾಯಿಗೆ ಸಂಬಂಧಿಸಿ ಒಳ್ಳೆಯದಾಗಿರುವುದು ಬಿಜೆಪಿ ಕಾಲದಲ್ಲಿ. ಗೆಜೆಟ್ ನೋಟಿಫಿಕೇಶನ್ ವರೆಗೂ ಅನುಮೋದನೆ ಕೊಡಿಸಿದ್ದೇವೆ. ಒಂದು ಗಿಡ ಕಡಿಯಬೇಕೆಂದರೆ ಆರು ತಿಂಗಳು ಬೇಕಾಗುತ್ತದೆ. ಮಹದಾಯಿ ಯೋಜನೆಯಲ್ಲಿ ಸುಮಾರು 2 ಲಕ್ಷ ಗಿಡ ಕತ್ತರಿಸಬೇಕಾಗುತ್ತದೆ. ಹೀಗಾಗಿ ಅನುಮತಿ ಸಿಗುವುದು ವಿಳಂಬವಾಗುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದರು.
ಟ್ರಿಬ್ಯುನಲ್‌ಗೆ ಕೊಟ್ಟವರು, ಗೋಡೆ ಕಟ್ಟಿದವರು ಕಾಂಗ್ರೆಸ್‌ನವರು. ಇಂಥವರು ಈಗ ಈ ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ವಿದ್ಯುತ್ ಯೋಜನೆ ಬರೀ ಗೋವಾಕ್ಕೆ ಸಂಬಂಧಿಸಿಲ್ಲ. ಇಲ್ಲಿಯೂ ಗಿಡಗಳನ್ನು ಕಡಿಯಬೇಕಾಗುತ್ತದೆ. ಆಗ ನಿಯಮಗಳನ್ನು ಪಾಲಿಸಲೇಬಾಕಾಗುತ್ತದೆ. ವಿದ್ಯುತ್ ಯೋಜನೆ ಹೋಗುವಲ್ಲಿ ಟೈಗರ್ ಕಾರಿಡಾರ್ ಇಲ್ಲ. ಆನೆ, ಟೈಗರ್ ಕಾರಿಡಾರ್ ಕಾರಣಕ್ಕೆ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳೂ ನಿಂತಿವೆ ಎಂದರು.