ಡೆಹರಾಡೂನ್: ಉತ್ತರಖಾಂಡದ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿ ಕಳೆದ ೧೭ ದಿನಗಳಿಂದ ಸಾವು ಬದುಕಿನ ಜೊತೆಗೆ ಹೋರಾಟ ನಡೆಸಿದ್ದ ೪೧ ಕಾರ್ಮಿಕರನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದ್ದು, ಕುಟುಂಬದ ಸದಸ್ಯರು, ರಕ್ಷಣಾ ಕಾರ್ಯಕರ್ತರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ಸುರಂಗದೊಳಗೆ ಕಳೆದ ೧೭ ದಿನಗಳಿಂದ ಸಮರ್ಪಕ ಊಟ, ಗಾಳಿ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳಿಲ್ಲದ ನಿತ್ರಾಣರಾಗಿದ್ದ ಕಾರ್ಮಿಕರನ್ನು ಹೊರ ತೆಗೆಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದಾಖಲು ಮಾಡಲಾಗಿದೆ.
ಕಾರ್ಮಿಕರನ್ನು ಹೊರ ತೆಗೆಯುತ್ತಿದ್ದಂತೆ ಅಗತ್ಯ ವೈದ್ಯಕೀಯ ನೆರವು ಕಲ್ಪಿಸುವ ಸಲುವಾಗಿ ಸ್ಥಳದಲ್ಲಿ ವಾಯುಪಡೆಯ ಹೆಲಿಕ್ಯಾಪ್ಟರ್ ಸ್ಟಾಂಡ್ ಬೈ ಆಗಿ ಇಟ್ಟುಕೊಳ್ಳಲಾಗಿತ್ತು. ಜೊತೆಗೆ ೪೧ ಅಂಬ್ಯುಲೆನ್ಸ್‌ಗಳು ವೈದ್ಯಕೀಯ ತಂಡದೊಂದಿಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಸುರಂಗ ಕೊರೆಯುವ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ ಎಂದು ರಕ್ಷಣಾ ಸಿಬ್ಬಂಧಿ ಘೋಷಿಸುತ್ತಿದ್ದಂತೆ ಕಾರ್ಮಿಕರ ಕುಟುಂಬದ ಸದಸ್ಯರು ಯಶಸ್ವಿಯಾಗಿ ಹೊರ ಬರಲಿ ಎಂದು ದೇವರಿಗೆ ಮೊರೆ ಹೋಗಿದ್ದರು.
ಸುರಂಗ ಕೊರೆಯಲು ಮತ್ತು ಕಾರ್ಮಿಕರನ್ನು ಯಶಸ್ವಿಯಾಗಿ ಸುರಂಗದಲ್ಲಿ ಹೊರ ತರಲು ನವಂಬರ್ ೧೨ ರಿಂದ ರಕ್ಷಣಾ ತಂಡ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿತ್ತು. ರಕ್ಷಣಾ ಕಾರ್ಯಾಚರಣೆ ತುಸು ಆತುರ ಮಾಡಿದರೂ ಎಡವಟ್ಟಾಗಲಿದೆ ಎನ್ನುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಿದ್ದರು. ಸಾಂಪ್ರದಾಯಿಕವಾಗಿ ಸುರಂಗ ಕೊರೆಯುವ ಮಂದಿ ಸೇರಿದಂತೆ ವಿವಿಧ ಸುರಂಗ ತಜ್ಞರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಥ್ ನೀಡಿದ್ದರು.
ಧೈರ್ಯ ತುಂಬಿದ ಮುಖ್ಯಮಂತ್ರಿ: ಸುರಂಗದಿಂದ ಹೊರ ಬಂದ ಕಾರ್ಮಿಕರೊಂದಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾತುಕತೆ ನಡೆಸಿ ಧೈರ್ಯ ತುಂಬಿದರು. ಕೇಂದ್ರ ರಾಜ್ಯ ಹೆದ್ದಾರಿ ಸಚಿವ ಜನರಲ್ ವಿಕೆ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳದಲ್ಲಿ ಬೀಡು ಬಿಟ್ಟು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದರು.
ರಕ್ಷಣಾ ಸಿಬ್ಬಂದಿ ಶ್ರಮಕ್ಕೆ ಫಲ: ಉತ್ತರಾಖಂಡದ ಸಿಲ್ಕ್ಯಾರಿ ಸುರಂಗದಲ್ಲಿ ಸಿಲುಕಿರುವ ೪೧ ಕಾರ್ಮಿಕರ ರಕ್ಷಣೆಗೆ ಕಳೆದ ೧೭ ದಿನಗಳಿಂದ ರಕ್ಷಣಾ ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹಸ್ನೇನ್ (ನಿವೃತ್ತ) ಹೇಳಿದ್ದಾರೆ. ಕಾರ್ಮಿಕರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವುದು ಸೇರಿದಂತೆ ಕಾರ್ಮಿಕರನ್ನು ಸ್ವೀಕರಿಸಲು ಸಿದ್ಧತೆ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ
“ಸುರಂಗದಲ್ಲಿ ಸಿಲುಕಿದ್ದ ಮೊದಲ ಕಾರ್ಮಿಕನನ್ನು ಯಶಸ್ವಿಯಾಗಿ ಹೊರ ಕರೆತರುತ್ತಿದ್ದಂತೆ ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳದಲ್ಲಿದ್ದ ಮಂದಿಯ ಸಂತಸ ಮುಗಿಲು ಮುಟ್ಟಿತ್ತು. ಕುಟುಂಬದ ಸದಸ್ಯರ ಆನಂದಕ್ಕೆ ಪಾರವೇ ಇರಲಿಲ್ಲ. “ಅಂತಿಮ ಹಂತದಲ್ಲಿ ಹೈಟೆಕ್ ಯಂತ್ರಗಳು ಅಗತ್ಯವಿರುವ ೬೦ ಮೀಟರ್ ಸುರಂಗ ಕೊರೆಯಲು ವಿಫಲವಾದ ನಂತರ ಸಾಂಪ್ರದಾಯಿಕವಾಗಿ ಸುರಂಗ ಕೊರೆಯುವ ತಜ್ಞರ ಸಹಕಾರ ಪಡೆಯಲಾಗಿತ್ತು”
ಪ್ರಧಾನಿ ಶುಭಾಶಯ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ಸುರಂಗದಲ್ಲಿ ಇಷ್ಟು ದಿನ ಸಿಕ್ಕಿಬಿದ್ದ ಕಾರ್ಮಿಕರೇ ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ದೀರ್ಘಾವಧಿಯ ಕಾಯುವಿಕೆಯ ನಂತರ ಈ ಕಾರ್ಮಿಕ ಸ್ನೇಹಿತರು ಈಗ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಿದ್ದಾರೆ. ಇದು ತುಂಬಾ ತೃಪ್ತಿಯ ವಿಷಯ. ಈ ಸವಾಲಿನ ಸಮಯದಲ್ಲಿ ಈ ಎಲ್ಲಾ ಕುಟುಂಬಗಳು ತೋರಿದ ತಾಳ್ಮೆ ಮತ್ತು ಧೈರ್ಯ ಸಾಕಷ್ಟು ಪ್ರಶಂಸದಾಯಕ ಎಂದು ಅವರು ಟ್ವೀಟ್ ಮಾಡಿದ್ದಾರೆ.