ಬೀದರ್ : ಧರ್ಮಸ್ಥಳ ಸುತ್ತಮುತ್ತ ಮೀಸಲು ಅರಣ್ಯದೊಳಗೆ ಸಮಾಧಿ ಅಗೆಯುತ್ತಿರುವ ಎಸ್.ಐ.ಟಿ.ಗೆ ಕೆಲವೆಡೆ ಮಾನವರ ಅಸ್ಥಿ ಸಿಕ್ಕಿದ್ದು, ತನಿಖೆ ಮುಗಿದ ಬಳಿಕ ಅಕ್ರಮವಾಗಿ ಶವ ಹೂತಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಬೀದರ್ ನಲ್ಲಿಂದು ಕರ್ನಾಟಕ ಮಾಧ್ಯಮ ಅಕಾಡಮಿ ಆಯೋಜಿಸಿದ್ದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯದಲ್ಲಿ ಅಕ್ರಮವಾಗಿ ಶವ ಹೂತಿರುವುದು ದೃಢಪಟ್ಟರೆ, ಬೇಜವಾಬ್ದಾರಿತನ, ನಿರ್ಲಕ್ಷ್ಯ ತೋರಿದ ಅರಣ್ಯ ಅಧಿಕಾರಿ, ಸಿಬ್ಬಂದಿ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಅಂದಹಾಗೇ ಧರ್ಮಸ್ಥಳದಲ್ಲಿ ಶವ ಹೂತುಹಾಕಿದ್ದಾರೆ ಎಂಬುದಾಗಿ ದೂರುದಾರರೊಬ್ಬ ದೂರು, ತಪ್ಪೊಪ್ಪಿಗೆಯ ನಂತ್ರ ಅಸ್ಥಿ ಪಂಜರಗಳಿಗಾಗಿ ನೇತ್ರಾವತಿ ಸ್ನಾನ ಘಟ್ಟದ ಅರಣ್ಯದೊಳಗೆ ಎಸ್ಐಟಿ ತಂಡ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪಾಯಿಂಟ್ ನಂ.6 ಮತ್ತು 13ರಲ್ಲಿ ಅಸ್ಥಿಪಂಜರದ ಮೂಳೆಗಳು ದೊರೆತಿದ್ದರು. ಈಗ 11/A ಎನ್ನುವಂತ ಪಾಯಿಂಟ್ ಕೂಡ ಗುರುತಿಸಲಾಗಿದೆ. ಅಲ್ಲಿಯೂ ಎಸ್ಐಟಿ ಶೋಧ ಕಾರ್ಯಾಚರಣೆ ನಡೆಸಲಿದೆ. ಆ ಬಳಿಕ ಶವಗಳ ಹೂತಿಟ್ಟ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯುವ ಸಾಧ್ಯತೆ ಇದೆ.