ಬೆಂಗಳೂರು : ಮುಡಾದಲ್ಲಿ ಯಾರು ಯಾವುದನ್ನೂ ಮುಚ್ಚಿ ಹಾಕಬೇಕಾಗಿಲ್ಲ. ಇಲ್ಲಿ ಯಾವುದೇ ಅನ್ಯಾಯವೂ ಆಗಿಲ್ಲ. ಆಸ್ತಿ ಕಳೆದುಕೊಂಡವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಡಾ ನಿಯಮದಂತೆ ಪರಿಹಾರ ನೀಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬಿಡಿಎನಲ್ಲಿ ಶೇ ೬೦:೪೦ ಅನುಪಾತ ಇದ್ದು, ಮೂಡಾದಲ್ಲಿ ೫೦:೫೦ ಅನುಪಾತದಲ್ಲಿ ಪರಿಹಾರ ನೀಡುವಂತೆ ಕಾನೂನು ಮಾಡಿಕೊಂಡಿದ್ದಾರೆ. ಹೀಗಾಗಿ ಕಾನೂನು ಪ್ರಕಾರವೇ ಪರಿಹಾರ ನೀಡಲಾಗಿದೆ. ಸಿಎಂ ಅವರು ಚುನಾವಣಾ ಅಫಿಡವಿಟ್ ನಲ್ಲಿ ತಮ್ಮ ಪತ್ನಿಗೆ ಬಂದಿರುವ ಆಸ್ತಿಗಳ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದರು.
೧೩ಕ್ಕೆ ಮುಖ್ಯಮಂತ್ರಿಗಳಿಂದ ಕಾರ್ಯಕರ್ತರ ಭೇಟಿ : ಪದಾಧಿಕಾರಿಗಳು, ಕಾರ್ಯಕರ್ತರನ್ನು ಭೇಟಿ ಮಾಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಬೇಕಾಗಿತ್ತು. ಅನ್ಯ ಕಾರ್ಯನಿಮಿತ್ತ ಬರಲಾಗಲಿಲ್ಲ. ಆದರೆ ಜುಲೈ ೧೩ ರಂದು ಭೇಟಿಯಾಗಲಿದ್ದಾರೆ. ಶೀಘ್ರದಲ್ಲೇ ದಿನಕ್ಕೆ ಇಬ್ಬರು ಮಂತ್ರಿಗಳು ಕಾರ್ಯಕರ್ತರನ್ನು ಭೇಟಿಯಾಗುವ ಕಾರ್ಯಕ್ರಮ ರೂಪಿಸಲಾಗುವುದು. ಯಾವ, ಯಾವ ಮಂತ್ರಿಗಳು ಯಾವಾಗ ಲಭ್ಯವಿರಲಿದ್ದಾರೆ ಎನ್ನುವ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.