ಧಾರವಾಡ : ಸರ್ಕಾರದ ಇಲಾಖೆಗಳ ಕಾರ್ಯವೈಖರಿಯನ್ನು ಪರಿಶೀಲಿಸುವ ಜೊತೆಗೆ, ಸಾರ್ವಜನಿಕರಿಗೆ ಅಗತ್ಯವಿರುವ ಸರ್ಕಾರಿ ಸೌಲಭ್ಯಗಳು ಸಕಾಲದಲ್ಲಿ ಸಿಗುವಂತೆ ಮಾಡುವ ಕಾರ್ಯವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಾಡುತ್ತಿದ್ದು, ಅದು ವಾಚ್‌ಡಾಗ್ ದಂತೆ ಕಾಯುತ್ತಿದೆ. ಜಿಲ್ಲೆಯಲ್ಲಿ ಎಲ್ಲ ವರ್ಗದ ಜನ, ಸಮುದಾಯದಲ್ಲಿ ಕಾನೂನುಗಳ ಅರಿವು ಮೂಡಿಸಿ, ಅರ್ಹರಿಗೆ ನೆರವು ನೀಡಲು ಆಯೋಜಿಸಿದ್ದ ವಿಶೇಷ ಅಭಿಯಾನಗಳು ಅತ್ಯಂತ ಯಶಸ್ವಿಯಾಗಿ ಸುಮಾರು ೫ಲಕ್ಷ ಫಲಾನುಭವಿಗಳಿಗೆ ಅಭಿಯಾನದ ಪ್ರಯೋಜನ ತಲುಪಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ವಕೀಲರ ಸಂಘ, ಜಿಲ್ಲಾಡಳಿತ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಜರುಗಿದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಮತ್ತು ಅರೇಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಎಲ್ಲರಿಗೂ ಕಾನೂನು ಸೇವೆಗಳು ಲಭ್ಯವಾಗಬೇಕು. ನ್ಯಾಯ ಪಡೆಯುವಲ್ಲಿ ಯಾವುದೇ ಭೇದಭಾವ ಇಲ್ಲದೆ ಸಮಾನವಾಗಿ ಎಲ್ಲರಿಗೂ ಸಿಗುವಂತೆ ಮಾಡುವುದು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯವಾಗಿದೆ.
ಕಾನೂನು ಸೇವೆಗಳ ಪ್ರಾಧಿಕಾರವು ರಾಷ್ಟ್ರಮಟ್ಟದಿಂದ ತಾಲೂಕು ಮಟ್ಟದವರೆಗೆ ರಚನೆಗೊಂಡಿದೆ. ಕಾನೂನು ಅರಿವು ಮೂಡಿಸಿ, ಅಗತ್ಯವಿದ್ದಲ್ಲಿ ಉಚಿತ ನೆರವು ನೀಡುವ ಕಾರ್ಯವನ್ನು ಕಾನೂನು ಸೇವೆ ಪ್ರಾಧಿಕಾರ ಮಾಡುತ್ತಿದೆ. ಸರಕಾರಿ ಇಲಾಖೆಗಳ ಕಾರ್ಯವೈಖರಿ, ಸಮಸ್ಯೆ ಹಾಗೂ ಸೌಲಭ್ಯಗಳ ಕುರಿತು ಕಾನೂನು ಸೇವೆಗಳ ಪ್ರಾಧಿಕಾರ ಜಾಗೃತಿ ವಹಿಸಿದ್ದು, ಅದು ವಾಚ್ ಡಾಗ್ ಆಗಿ ಕೆಲಸ ಮಾಡುತ್ತಿದೆ ಎಂದು ಪಿಡಿಜೆ ಕೆ.ಜಿ.ಶಾಂತಿ ಹೇಳಿದರು.