ಬೆಂಗಳೂರು: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ದೇಶಾದ್ಯಂತ ನಡೆಯುವ ರಾಷ್ಟ್ರೀಯ ಅರ್ಹತ ಪ್ರವೇಶ ಪರೀಕ್ಷೆ(ನೀಟ್)ಅನ್ನು ರದ್ದುಪಡಿಸಿ ಹಳೆಯ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ವ್ಯವಸ್ಥೆಯನ್ನೇ ಮುಂದುವರೆಸುವ ಮಹತ್ವದ ನಿರ್ಣಯವನ್ನು ಉಭಯ ಸದನಗಳಲ್ಲಿ ಮಂಡಿಸಿ, ಪ್ರತಿಪಕ್ಷಗಳ ವಿರೋಧದ ನಡುವೆಯೂ ಅಂಗೀಕರಿಸಲಾಯಿತು.
ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ನೀಟ್ ಪರೀಕ್ಷೆಯನ್ನ ರದ್ದುಗೊಳಿಸುವ ಸಂಬಂಧ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಮಸೂದೆ ಮಂಡಿಸಿ ಮಾತನಾಡಿ, ನೀಟ್ ಪರೀಕ್ಷಾ ವ್ಯವಸ್ಥೆಯು ಗ್ರಾಮೀಣ ಬಡಮಕ್ಕಳ ವೈದ್ಯಕೀಯ ಶಿಕ್ಷಣ ಅವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಹಾಗೂ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ನಿರರ್ಥಕಗೊಳಿಸುತ್ತದೆ. ರಾಜ್ಯಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯಸರ್ಕಾರದ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ನೀಟ್ ಪರೀಕ್ಷೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ನೀಟ್ ಪರೀಕ್ಷೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕು, ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಸರ್ಕಾರ ನಡೆಸುವ ಸಾಮಾನ್ಯ ಪರೀಕ್ಷೆ ಸಿಇಟಿ ಅಂಕಗಳನ್ನು ಆಧರಿಸಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿ ನೀಡಬೇಕೆಂದು ಮತ್ತು ನೀಟ್ ಪರೀಕ್ಷೆಯಲ್ಲಿ ಆಗುತ್ತಿರುವ ಪುನರಾವರ್ತಿತ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಪಡಿಸುವುದು ಜೊತೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಅಧಿನಿಯಮ 2019 ರಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕೆಂದು ಸದನ ಒತ್ತಾಯಿಸುತ್ತದೆ ಎಂಬ ನಿರ್ಣಯ ಮಂಡಿಸಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ನಿರ್ಣಯ ಸರ್ವಾನುಮತದಿಂದ ಅಂಗೀಕಾರಗೊಂಡಿದೆ ಎಂದು ಪ್ರಕಟಿಸಿದರು.
ಇತ್ತೀಚೆಗೆ ದೇಶಾದ್ಯಂತ ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಸಾಕಷ್ಟು ಲೋಪದೋಷಗಳು ಉಂಟಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನಲೆಯಲ್ಲಿ ನೀಟ್‌ನಿಂದ ವಿನಾಯ್ತಿ ನೀಡಿ ಕರ್ನಾಟಕ ಸರ್ಕಾರ ಪ್ರತಿ ವರ್ಷ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗೆ ನಡೆಯುವ ಸಿಇಟಿಯನ್ನು ಮುಂದುವರೆಸಲು ಅನುವು ಮಾಡಿಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು. ಗದ್ದಲದ ನಡುವೆಯೇ ನಿರ್ಣಯವನ್ನು ಅಂಗೀಕರಿಸಲಾಯಿತು.